ಹೆಲ್ಮೆಟ್ ಹಾಕದ ಮಹಿಳೆಯಿಂದ ಮಹಿಳಾ ಎಸ್ಐ ಕೆನ್ನೆಗೆ ಏಟು!
ಮಂಗಳೂರು: ಹಂಪನಕಟ್ಟೆ ಸಿಗ್ನಲ್ ಬಳಿ ಸಂಚಾರಿ ಮಹಿಳಾ ಎಸ್ಐಗೆ ಮಹಿಳೆಯೊಬ್ಬಳು ಹಲ್ಲೆ ನಡೆಸಿದ್ದಾಳೆ.
ಹಲ್ಲೆ ನಡೆಸಿದ ಗುಜರಾತಿ ಮೂಲದ ಮಹಿಳೆ ಕಿಂಚಲ್ ಗಾಂಧಿ ಕೇರಳ ಪಯ್ಯನೂರು ಮಹಾತ್ಮಾ ಗಾಂಧಿ ಕಾಲೇಜ್ನಲ್ಲಿ ಉಪನ್ಯಾಸಕಿ.
ಗುರುವಾರ ರಾತ್ರಿ 8 ಗಂಟೆ ವೇಳೆಗೆ ಹಂಪನಕಟ್ಟೆ ವೃತ್ತದಲ್ಲಿ ಹೆಲ್ಮೆಟ್ ಹಾಕದೆ ಸ್ಕೂಟರ್ ಚಲಾಯಿಸುತ್ತಿದ್ದ ಮಹಿಳೆಗೆ ವೃತ್ತದಲ್ಲಿ ಒಮ್ನಿ ವಾಹನ ಸವರಿಕೊಂಡು ಹೋಗಿದೆ. ಈ ಸಂದರ್ಭ ಎರಡು ವಾಹನಗಳನ್ನು ನಿಲ್ಲಿಸಿದ ಸಂಚಾರಿ ಪೊಲೀಸ್ ಠಾಣೆಯ ಮಹಿಳಾ ಎಸ್ಐ ಭವ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಒಮ್ನಿ ವಾಹನವನ್ನು ತೆರಳುವಂತೆ ಹೇಳಿ, ಮಹಿಳೆಯನ್ನು ನಿಲ್ಲಿಸಿ ಹೆಲ್ಮೆಟ್ ಹಾಕದಿರುವ ಕುರಿತು ಪ್ರಶ್ನಿಸಿದ್ದಾರೆ. ಸಿಟ್ಟಿಗೆದ್ದ ಮಹಿಳೆ ಏರು ದನಿಯಲ್ಲಿ ಮಾತನಾಡಿದ್ದಾಳೆ. ಅವರನ್ನು ಬಿಟ್ಟು ನನ್ನನ್ನು ನಿಲ್ಲಿಸಿದ್ಯಾಕೆ ಎಂದು ಬೊಬ್ಬೆ ಹೊಡೆದಿದ್ದಾಳೆ. ಎಸ್ಐ ದಂಡ ವಿಧಿಸಿದಾಗ ಸಿಟ್ಟಿಗೆದ್ದ ಮಹಿಳೆ ಎಸ್ಐ ಕೆನ್ನೆಗೆ ಬಾರಿಸಿದ್ದಾಳೆ. ಇದರಿಂದ ಅವಮಾನಿತರಾದ ಎಸ್ಐ ಪೊಲೀಸ್ ವಾಹನದಲ್ಲಿ ತೆರಳಿದ್ದಾರೆ. ಎಸ್ಐಗೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಮಹಿಳೆಯನ್ನು ಮಹಿಳಾ ಪೊಲೀಸರು ಬಂಧಿಸಿ ವಾಹನದೊಳಕ್ಕೆ ಒಯ್ಯುವ ವೇಳೆ ಮಹಿಳೆ ಬೊಬ್ಬೆ ಹೊಡೆದಿದ್ದು, ಸ್ಥಳೀಯರು ಮಹಿಳೆಯನ್ನು ಬೆಂಬಲಿಸಿದ್ದಾರೆ.
'ನನ್ನ ಗಂಡ ಬರುತ್ತಿದ್ದಾರೆ, ಅಲ್ಲಿವರೆಗೆ ನಾವು ಹೋಗುವುದಿಲ್ಲ' ಎಂದು ಕಿಂಚಲ್ ಗಾಂಧಿ ಬೊಬ್ಬೆ ಹೊಡೆದಿದ್ದಾಳೆ. ಬಳಿಕ ಪೊಲೀಸರು ಮಹಿಳೆಯನ್ನು ವಿಚಾರಣೆಗೆ ಪಾಂಡೇಶ್ವರ ಪೊಲೀಸ್ ಠಾಣೆಗೆ ಕರೆದೊಯ್ದು ಕೇಸ್ ಹಾಕಿದ ಬಳಿಕ ಬಿಟ್ಟಿದ್ದಾರೆ.