ಶಿರಾಡಿ ಘಾಟಿ ಹೆದ್ದಾರಿ ಬಂದ್ ಡಿಸೆಂಬರ್ಗೆ
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75 ಹಾದುಹೋಗುವ ಶಿರಾಡಿ ಘಾಟ್ ರಸ್ತೆ ಅಭಿವೃದ್ಧಿ ಸಲುವಾಗಿ ಡಿ. 1ರಿಂದ ಮೇ 30ರ ವರೆಗೆ ಬಂದ್ ಆಗಲಿದೆ.
ಇದಕ್ಕೆ ಪರ್ಯಾಯವಾಗಿ ಬೆಂಗಳೂರು ಕಡೆ ಹೋಗುವ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಟೂರಿಸ್ಟ್ ಬಸ್ಗಳು ವಯಾ ಮಡಿಕೇರಿ ಮುಖೇನ ಸಂಚರಿಸಲಿವೆ. ಟ್ಯಾಂಕರ್, ಟ್ರೇಲರ್ಗಳು ಹಾಗೂ ಉಡುಪಿಯಿಂದ ಹೊರಡುವ ಮಲ್ಟಿಆ್ಯಕ್ಸಿಲ್ ಬಸ್ಗಳಿಗೆ ಕುಂದಾಪುರ, ಶಿವಮೊಗ್ಗ ಮೂಲಕ ಬೆಂಗಳೂರು ಮಾರ್ಗ ತೋರಿಸಲಾಗಿದೆ. ಮೈಸೂರಿಗೆ ಹೋಗುವ ಟ್ಯಾಂಕರ್ಗಳು ಮಾತ್ರ ಮಡಿಕೇರಿ ಮಾರ್ಗ ಬಳಸಲು ಅನುಮತಿಸಲು ನಿರ್ಧರಿಸಲಾಗಿದೆ. ಕೆಎಸ್ಆರ್ಟಿಸಿ ಸಾಮಾನ್ಯ ಸಾರಿಗೆಗೆ ಹಾಗೂ ಇತರೆ ವಾಹನಗಳಿಗೆ ಬೇರೆ ಪರ್ಯಾಯ ರಸ್ತೆಯಲ್ಲಿ ಸಾಗುವಂತೆ ಸೂಚಿಸಲಾಗಿದೆ. ಇದಕ್ಕೂ ಮೊದಲು ಆ.15ರ ವೇಳೆಗೆ ಪರ್ಯಾಯ ರಸ್ತೆಗಳನ್ನು ಅಗಲಗೊಳಿಸುವುದು, ದುರಸ್ತಿಪಡಿಸುವ ಕಾಮಗಾರಿಯನ್ನು ಸಮರೋಪಾದಿಯಲ್ಲಿ ಮುಗಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅಧ್ಯಕ್ಷತೆಯಲ್ಲಿ ನಡೆದ ಶಿರಾಡಿ ಘಾಟಿ ದುರಸ್ತಿ ಕುರಿತ ಸಮಾಲೋಚನಾ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಒಂದು ವಾರದಲ್ಲಿ ಸಮೀಕ್ಷೆ: ಪ್ರಸ್ತುತ ಶಿರಾಡಿ ಘಾಟಿಯಲ್ಲಿ ದಿನಂಪ್ರತಿ 25 ಸಾವಿರ ವಾಹನಗಳು ಸಂಚರಿಸುತ್ತಿದೆ. ಇಲ್ಲಿನ ವಾಹನ ಸಾಂದ್ರತೆ ದೃಢಪಡಿಸಲು ಒಂದು ವಾರ ಕಾಲ ವಾಹನ ಸಂಚಾರ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಅದೇ ರೀತಿ ಪರ್ಯಾಯ ರಸ್ತೆ ಮಡಿಕೇರಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಸಮೀಕ್ಷೆ ನಡೆಸಲಾಗುವುದು. ಸಂಪಾಜೆಯ ಕೊಯನಾಡಿನಲ್ಲಿ ರಸ್ತೆಯನ್ನು ಸಹಜ ಸ್ಥಿತಿಗೆ ತರಲಾಗುವುದು. ಮಾಣಿ-ಸಂಪಾಜೆ ಹೆದ್ದಾರಿಯಲ್ಲಿ 71 ಕಿ.ಮೀ. ಪೈಕಿ 61 ಕಿ.ಮೀ ಅಭಿವೃದ್ಧಿಪಡಿಸಲಾಗಿದೆ. 10 ಕಿ.ಮೀ. ಕಾಮಗಾರಿ ಬಾಕಿ ಇದೆ. ಇದರಲ್ಲಿ 5.5 ಕಿ.ಮೀ. ಸಿಂಗಲ್ ರಸ್ತೆ ಇದ್ದು, 2015 ಜ.31ರೊಳಗೆ ಕಾಮಗಾರಿ ಪೂರ್ತಿ ಮುಗಿಸುವಂತೆ ಸರ್ಕಾರ ಗಡುವು ವಿಧಿಸಿದೆ ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಅಧಿಕಾರಿ ಅಶೋಕ್ ತಿಳಿಸಿದರು.
ಬಸ್ಗಳಿಗೆ ಪರ್ಯಾಯ ಮಾರ್ಗ: ಶಿರಾಡಿ ಘಾಟ್ ಬಂದ್ ಸಂದರ್ಭ ಪರ್ಯಾಯವಾಗಿ ಮಡಿಕೇರಿ ಮೂಲಕ 40 ಕಿ.ಮೀ, ಇಲವಾಲ ಬೈಪಾಸ್ನಿಂದ 28 ಕಿ.ಮೀ, ಚಾರ್ಮಾಡಿ ಮುಖೇನ 20 ಕಿ.ಮೀ. ಸುತ್ತು ಬಳಸಿ ಸಂಚರಿಸಬೇಕಾಗುತ್ತದೆ. ಕೆಎಸ್ಆರ್ಟಿಸಿಯ 200 ಬಸ್ಗಳು ಹಾಗೂ ಖಾಸಗಿಯ 300 ಬಸ್ಗಳು ಪರ್ಯಾಯ ಮಾರ್ಗವನ್ನು ಬಳಸಬೇಕಾಗುತ್ತದೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.
ಹೆಚ್ಚುವರಿ ರೈಲಿಗೆ ಬೇಡಿಕೆ: ಶಿರಾಡಿ ಘಾಟ್ ಬಂದ್ನ 6 ತಿಂಗಳ ಕಾಲ ಮಂಗಳೂರು-ಬೆಂಗಳೂರು ಮಧ್ಯೆ ಹೆಚ್ಚುವರಿ ರೈಲು ಸಂಚಾರ ಸಾಧ್ಯತೆಯ ಕುರಿತು ರೈಲ್ವೆ ಜತೆ ಮಾತುಕತೆ ನಡೆಸುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅಧಿಕಾರಿಗಳಿಗೆ ಸೂಚಿಸಿದರು. ಹೆಚ್ಚಿನ ರೈಲು ಸಂಚಾರವಲ್ಲದೆ ಗೂಡ್ಸ್ ರೈಲು ಓಡಾಟಕ್ಕೆ ಅವಕಾಶ ಕಲ್ಪಿಸುವಂತೆ ಪ್ರಯತ್ನಿಸಬಹುದು ಎಂದರು.
ಕಾರ್ಕಳ-ಹೊಸಪೇಟೆ, ಆಗುಂಬೆ ಘಾಟಿ, ಬೇಲೂರು, ಬಿಸಿಲೆ ಘಾಟಿ ಇತ್ಯಾದಿ ಪರ್ಯಾಯ ಮಾರ್ಗದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಬೆಂಗಳೂರಿನಿಂದ ಮಂಗಳೂರಿಗೆ ಬರುವ ವಾಹನಗಳು ಮೈಸೂರು ಅಥವಾ ಶಿವಮೊಗ್ಗ, ಬಿಸ್ನಳ್ಳಿ ರಸ್ತೆ ಬಳಸುವಂತೆ ಸೂಚಿಸಲಾಯಿತು.
ಪರ್ಯಾಯ ಮಾರ್ಗಗಳಲ್ಲಿ ಅಪಘಾತ ಎದುರಿಸಲು ಕ್ರೈನ್ ಮುಂತಾದ ಸೌಲಭ್ಯ ವ್ಯವಸ್ಥೆ ಮಾಡಬೇಕು. ಒಂದು ವಾರದಲ್ಲಿ ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅರಣ್ಯ ಇಲಾಖೆ, ಮೆಸ್ಕಾಂ ಇಲಾಖೆಗಳು ಸೇರಿ ಜಂಟಿ ಸ್ಥಳ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಚಾರ್ಮಾಡಿ ಘಾಟಿ ದುರಸ್ತಿಗೆ ಅನುದಾನ ಬಿಡುಗಡೆಯಾಗಲಿದೆ. ಶಿರಾಡಿ ದುರಸ್ತಿ ಬಳಿಕ ಚಾರ್ಮಾಡಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸೂಪರಿಂಟೆಂಡೆಂಟ್ ಎಂಜಿನಿಯರ್ ಧರ್ಣರಾಜ್ ಹೇಳಿದರು.
ಶಿರಾಡಿ ಘಾಟಿ 4 ಲೇನ್
ಹಾಸನ-ಬಿಸಿರೋಡ್ ವರೆಗೆ ನಾಲ್ಕು ಪಥ ಮಾಡುವ ಪ್ರಸ್ತಾಪವೂ ಇದ್ದು, ಶಿರಾಡಿ ಘಾಟಿ ಕೂಡ ಚತುಷ್ಪಥವಾಗಲಿದೆ. ಇದಕ್ಕಾಗಿ ಅರಣ್ಯ, ಪರಿಸರ ಇಲಾಖೆಯ ಅನುಮತಿ ಪಡೆಯುವ ಕೆಲಸ ನಡೆಯುತ್ತಿದೆ ಎಂದು ಎನ್ಎಚ್ಐಎ ತಾಂತ್ರಿಕ ಅಧಿಕಾರಿ ಶೈಲೇಶ್ ಗಂಗಾಧರ್ ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಎಸ್ಪಿ ಡಾ.ಶರಣಪ್ಪ ವೇದಿಕೆಯಲ್ಲಿದ್ದರು.
ಅಭಿವೃದ್ಧಿ ಹೇಗೆ...?
ಸಕಲೇಶಪುರದ ಮಾರನಹಳ್ಳಿಯಿಂದ ಗುಂಡ್ಯ ವರೆಗೆ ಒಟ್ಟು 26 ಕಿ.ಮೀ. ಹೆದ್ದಾರಿ ಅಭಿವೃದ್ಧಿಯಾಗಲಿದೆ. ಅಂದರೆ 237 ಕಿ.ಮೀ.ನಿಂದ 260 ಕಿ.ಮೀ ವರೆಗೆ ಪ್ರಥಮ ಹಂತ. 237ರಿಂದ 250 ಕಿ.ಮೀ. ವರೆಗೆ 13 ಕಿ.ಮೀ ದೂರ ರು. 64 ಕೋಟಿ ವೆಚ್ಚದಲ್ಲಿ ಕಾಂಕ್ರಿಟ್ ಕಾಮಗಾರಿ ನಡೆಯಲಿದೆ. ಎರಡನೇ ಹಂತದ ಟೆಂಡರ್ನಲ್ಲಿ 250 ಕಿ.ಮೀ.ನಿಂದ 260 ಕಿ.ಮೀ ವರೆಗೆ ಕಾಂಕ್ರಿಟೀಕರಣ ಹಾಗೂ 216 ಕಿ.ಮೀ.ನಿಂದ 237 ಕಿ.ಮೀ. ವರೆಗೆ ಮಾರನಹಳ್ಳಿಯಿಂದ ಬಾಳುಪೇಟೆ ವರೆಗೆ 21 ಕಿ.ಮೀ ಡಾಂಬರೀಕರಣವೂ ಸೇರುತ್ತದೆ. ಇದಕ್ಕೆ ಒಟ್ಟು ರು. 85.28 ಕೋಟಿ ವೆಚ್ಚವಾಗಲಿದೆ. ಒಟ್ಟು ಕಾಮಗಾರಿಗೆ ಬಿಡುಗಡೆಯಾದ ಮೊತ್ತ ರು. 150 ಕೋಟಿ. ಕಾಂಕ್ರಿಟೀಕರಣ ಕಾಮಗಾರಿ 8.5 ಮೀಟರ್ ಅಗಲ, ಒಂದೂವರೆ ಅಡಿ ದಪ್ಪಕ್ಕೆ ನಡೆಯುತ್ತದೆ. ಇದೇ ಮೊದಲ ಬಾರಿಗೆ ಜರ್ಮನ್ ತಾಂತ್ರಿಕತೆ ಯಂತ್ರ ಬಳಸಿ ಕಾಮಗಾರಿ ನಡೆಯಲಿದೆ. 150 ಮೀಟರ್ನಂತೆ ಒಂದು ವಾರ ಒಂದು ಕಿ.ಮೀ. ಕಾಂಕ್ರಿಟ್ ಕಾಮಗಾರಿ ಪೂರೈಸಲಿದೆ.