ಉಪ್ಪಿನಂಗಡಿ: ಯಾಂತ್ರೀಕೃತ ದೋಣಿ ಹಸ್ತಾಂತರ
ಉಪ್ಪಿನಂಗಡಿ: ಜಿಲ್ಲಾಡಳಿತದ ಪ್ರಾಕೃತಿಕ ಆಪತ್ತು ನಿರ್ವಹಣಾ ಕಾರ್ಯಕ್ರಮದ ಅಂಗವಾಗಿ ನೆರೆ ಭೀತಿಗೆ ತುತ್ತಾಗಿರುವ ಉಪ್ಪಿನಂಗಡಿಗಾಗಿ ನೀಡಿದ್ದ ದೋಣಿಯನ್ನು ಶನಿವಾರ ಉಪ್ಪಿನಂಗಡಿಗೆ ಕಂದಾಯ ಇಲಾಖಾಧಿಕಾರಿಗಳು ತಂದು ಒಪ್ಪಿಸುವ ಮೂಲಕ ಇಲ್ಲಿನ ಜನತೆಯ ಬಹುಕಾಲದ ಬೇಡಿಕೆಯನ್ನು ಈಡೇರಿಸಿದಂತಾಗಿದೆ. 24 ಅಡಿ ಉದ್ದದ ಈ ಬೋಟ್ ಯಾಂತ್ರೀಕೃತವಾಗಿ ಚಲಿಸುವಂತದ್ದಾಗಿದ್ದು, ಪ್ರಸಕ್ತ ಯಂತ್ರವಿಲ್ಲದೆ ಕೇವಲ ಬೋಟ್ ಮಾತ್ರ ನೀಡಲಾಗಿದೆ. ಯಂತ್ರವನ್ನು ಸೋಮವಾರ ನೀಡಲಾಗುವುದೆಂದು ಕಂದಾಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಡಳಿತದ ದೋಣಿಯನ್ನು ಪ್ರಭಾರ ಉಪ ತಹಸೀಲ್ದಾರ್ ಮಂಜುನಾಥ್, ಕಂದಾಯ ಇಲಾಖೆ ಗ್ರಾಮಕರಣಿಕ ರಮಾನಂದ ಚಕ್ಕಡಿಯವರು ಶ್ರೀ ಸಹಸ್ರಲಿಂಗೇಶ್ವರ ದೇವಳದ ಸುಪರ್ದಿಗೆ ನೀಡಿದ್ದು ಕರುಣಾಕರ ಸುವರ್ಣ ನೇತೃತ್ವದ ದೇವಳದ ಆಡಳಿತ ಮಂಡಳಿ ಸ್ವೀಕರಿಸಿದೆ.