ನವೀಕರಿಸಬಹುದಾದ ಇಂಧನ ಅಭಿವೃದ್ಧಿಗೆ ರು. 1 ಸಾವಿರ ಕೋಟಿ
ಮಂಗಳೂರು: ನವೀಕರಿಸಬಹುದಾದ ಇಂಧನ ಅಭಿವೃದ್ಧಿಗೊಳಿಸಲು ಈ ಸಾಲಿನ ಕೇಂದ್ರ ಬಜೆಟ್ನಲ್ಲಿ ರು. 1 ಸಾವಿರ ಕೋಟಿ ಕಾದಿರಿಸಿದೆ ಎಂದು ಇಂಧನ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ನಿಶಿಕಾಂತ್ ದುಬೆ, ಬಿದ್ಯುತ್ ಬರಾನ್ ಮಹಾತೋ, ಪಿ.ಕೆ.ಬಿಜು ಇವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದೇಶದಲ್ಲಿ ನವೀಕರಿಸಬಹುದಾದ ವಿವಿಧ ರೀತಿಯ ಇಂಧನ ಮೂಲಗಳಿಂದ 2.45 ಲಕ್ಷ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ನಿರ್ಧರಿಸಲಾಗಿದೆ. ಇದರಲ್ಲಿ 1 ಲಕ್ಷ ಮೆಗಾವ್ಯಾಟ್ ಪವನ ಮತ್ತು ಸೋಲಾರ್ ಶಕ್ತಿಯಿಂದ, 20 ಸಾವಿರ ಮೆಗಾವ್ಯಾಟ್ ಸಣ್ಣ ಜಲವಿದ್ಯುತ್ ಯೋಜನೆಯಿಂದ ಹಾಗೂ 25 ಸಾವಿರ ಮೆಗಾವ್ಯಾಟ್ ಬಯೋ-ಶಕ್ತಿ ಮೂಲದಿಂದ ವಿದ್ಯುತ್ ಉತ್ಪಾದಿಸಲು ತೀರ್ಮಾನಿಸಲಾಗಿದೆ. ಕಳೆದ ಸಾಲಿನಲ್ಲಿ ರು. 4325 ಮೆಗಾವ್ಯಾಟ್ ಗುರಿಯಲ್ಲಿ ರು. 3618.79 ಮೆಗಾವ್ಯಾಟ್ ಸಾಧನೆ ಮಾಡಲಾಗಿದೆ. ಕರ್ನಾಟಕದಲ್ಲಿ ಕಳೆದ ಸಾಲಿನಲ್ಲಿ ಸಣ್ಣ ಜಲವಿದ್ಯುತ್ ಯೋಜನೆ 67.90 ಮೆ.ವ್ಯಾ., ಗಾಳಿಯಿಂದ 183 ಮೆ.ವ್ಯಾ., ಬಯೋದಿಂದ 112 ಮೆ.ವ್ಯಾ., ಸೋಲಾರ್ನಿಂದ 17 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲಾಗಿದೆ ಎಂದರು.