ಕಂದಾಯ ಇಲಾಖೆ ನಿರ್ಲಕ್ಷ್ಯಕ್ಕೆ ದೇಶದ ಗೌರವ ಬಲಿ!
ಸುಬ್ರಹ್ಮಣ್ಯ: ಗ್ರಾಮದ ಜನರೆ ಗ್ರಾಮಸ್ಥರ ಅನುಕೂಲಕ್ಕಾಗಿ ನಿರ್ಮಿಸಿಕೊಂಡ ಕಟ್ಟಡವೊಂದನ್ನು ಸರ್ಕಾರದ ಇಲಾಖೆಯೊಂದು ಹೇಗೆ ಕಡೆಗಣಿಸುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಗುತ್ತಿಗಾರು ಸಮೀಪದ ನಡುಗಲ್ಲು ಎಂಬಲ್ಲಿ ನಾಲ್ಕೂರು ಗ್ರಾಮದ ಕಂದಾಯಕ್ಕೆ ಸೇರಿದ ಗ್ರಾಮಸ್ಥರು ತಮ್ಮ ಅನುಕೂಲಕ್ಕಾಗಿ ನಿರ್ಮಿಸಿದ ಗ್ರಾಮಲೆಕ್ಕಿಗ ಕಚೇರಿ ಮತ್ತು ದಾನಿಯೊಬ್ಬರು ನಿರ್ಮಿಸಿಕೊಟ್ಟ ಧ್ವಜಸ್ತಂಭ ಇಲ್ಲಿ ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದೆ. ಇಲಾಖೆಯ ಬೇಜವಬ್ದಾರಿ ಜೊತೆಗೆ ದೇಶಭಕ್ತಿಯ ಅಸಲಿ ಮುಖ ಅನಾವರಣಗೊಂಡಿದೆ..
ದೇಶಾಭಿಮಾನ ಎಲ್ಲಿದೆ?: 2 ವರ್ಷಗಳ ಹಿಂದೆ ಜನರೆ ನಿರ್ಮಿಸಿದ ಗ್ರಾಮ ಲೆಕ್ಕಿಗ ಕಚೇರಿ ಇಲ್ಲಿ ಅನಾಥವಾದುದಲ್ಲದೆ, ದೇಶ ಭಕ್ತಿಯ ಪ್ರತಿರೂಪವಾಗಿ ನಿರ್ಮಿಸಿದ ಧ್ವಜಸ್ತಂಬ ಕೂಡ ತುಂಡಾಗಿ ನೆಲದಲ್ಲಿ ಹೊರಳಾಡುತ್ತಿದೆ. ಕಟ್ಟೆಯ ಒಂದೊಂದು ಭಾಗಗಳು ಒಂದೊಂದು ಕಡೆ ಬಿದ್ದಿದೆ. ದೇಶಾಭಿಮಾನದ ಮಾನ ಇಲ್ಲಿ ಹರಾಜಾಗಿದೆ. ದೇಶಾಭಿಮಾನ ಎಲ್ಲಿ ಹೋಗಿದೆ ಎಂಬ ಪ್ರಶ್ನೆ ಸ್ಥಳಿಯರಲ್ಲಿ ಮೂಡಿದೆ.
ಸರ್ಕಾರದ ಸವಲತ್ತುಗಳು ಗ್ರಾಮದ ಜತೆಗೆ ತಲುಪಬೇಕು ಎಂಬ ಸದುದ್ದೇಶದಿಂದ ಗುತ್ತಿಗಾರು ಗ್ರಾಮ ಪಂಚಾಯ್ತಿಗೆ ಒಳಪಟ್ಟ ನಾಲ್ಕೂರು ಗ್ರಾಮದ ನಡುಗಲ್ಲಿ ಎಂಬಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಕಂದಾಯ ಇಲಾಖೆಗೆ ಸೇರಿದ ನಾಲ್ಕೂರು ಗ್ರಾಮದ ಜನರೆಲ್ಲರೂ ಸೇರಿ ಜನತೆಯ ಅನುಕೂಲಕ್ಕಾಗಿ ಸ್ವಂತ ಖರ್ಚಿನಿಂದ ಗ್ರಾಮ ಲೆಕ್ಕಿಗ ಕಟ್ಟಡ ಹಾಗೂ ದಾನಿಯೊಬ್ಬರು ಧ್ವಜಸ್ತಂಬ ನಿರ್ಮಿಸಿದ್ದರು. ಕಟ್ಟಡದ ಸಂಪೂರ್ಣ ವೆಚ್ಚವನ್ನು ಸ್ಥಳಿಯರು ಹಾಗೂ ಧ್ವಜಸ್ತಂಬದ ಖರ್ಚನ್ನು ದಾನಿಯೇ ಬರಿಸಿದ್ದರು. ಈ ಕಟ್ಟಡವೀಗ ನಿರ್ವಹಣೆ ಇಲ್ಲದ ಪರಿಣಾಮ ಸುತ್ತಮುತ್ತಲೆಲ್ಲಾ ಗಿಡ ಬಳ್ಳಿಗಳು ಬೆಳೆದು ಕಚೇರಿ ಬಳಕೆಗೆ ಸಿಗದಂತಾಗಿದೆ. ಬಾಗಿಲು ತೆರೆಯದೆ ಬಹಳಷ್ಟೂ ಸಮಯ ಇರುವುದರಿಂದ ಕಟ್ಟಡ ಪಾಳು ಬಿದ್ದಿದೆ. ಧ್ವಜಕಂಬದ ಬುಡ ಒಂದು ಕಡೆ ಇದ್ದರೆ ಕಂಬ ಪೊದೆಯಲ್ಲಿ ಬಿದ್ದುಕೊಂಡಿದೆ. ಇದೊಂದು ಗಂಭೀರ ವಿಚಾರವಾಗಿದ್ದರೂ ಇದೆಲ್ಲದರ ಬಗ್ಗೆ ಕಂದಾಯ ಇಲಾಖೆ ನಿರ್ವಹಣೆ ತೋರದೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ಇವುಗಳು ನಿರ್ಗ್ಗತಿಕವಾಗುವ ಈ ಹಂತಕ್ಕೆ ತಲುಪಿದೆ. ರಾಷ್ಟ್ರಭಿಮಾನಕ್ಕೆ ಜವಬ್ದಾರಿಯುತ ಕಂದಾಯ ಇಲಾಖೆಯಿಂದಲೇ ಅವಮಾನವಾಗಿದೆ.
ಇಲಾಖೆಯಿಂದ ನಿರ್ಲಕ್ಷ್ಯ: ಜನರ ಅಪೇಕ್ಷೆಯಂತೆ ಇಲ್ಲಿಗೆ ಕಾಯಂ ಗ್ರಾಮ ಲೆಕ್ಕಿಗರನ್ನು ಒದಗಿಸಲಾಗಿದೆ. ಅದರಂತೆ ಗ್ರಾಮ ಲೆಕ್ಕಿಗ ಸೇರಿ ಓರ್ವ ಸಹಾಯಕರು ಕೂಡ ಇಲ್ಲಿದ್ದಾರೆ. ಆದರೆ ಕಂದಾಯ ಇಲಾಖೆ ಗ್ರಾಮ ಲೆಕ್ಕಿಗರನ್ನು ಸರಿಯಾಗಿ ಕಳುಹಿಸದೇ ಜನಸಾಮಾನ್ಯರ ಅಹವಾಲುಗಳಿಗೆ ಸ್ಪಂದಿಸುವಲ್ಲಿ ಕಂದಾಯ ಇಲಾಖೆ ನಿರ್ಲಕ್ಷ್ಯ ತೋರಿದ ಪರಿಣಾಮ ಈ ಪರಿಸ್ಥಿತಿ ತಲೆದೋರಿದೆ.
ಒತ್ತಡದಲ್ಲಿ ಗ್ರಾಮಲೆಕ್ಕಿಗ ಅಧಿಕಾರಿ: ಇಲ್ಲಿನ ಕರ್ತವ್ಯ ಹೊತ್ತ ಗ್ರಾಮ ಲೆಕ್ಕಿಗರ ಸ್ಥಿತಿ ಅಡಕತ್ತರಿಯಲ್ಲಿದೆ. ಇವರ ಕರ್ತವ್ಯಕ್ಕೆ ನೆಲೆಯೇ ಇಲ್ಲದಂತೆ ಕಂದಾಯ ಇಲಾಖೆ ನಡೆಸಿಕೊಂಡಿದೆ. ಯಾಕೆಂದರೆ ಚುನಾವಣೆ ಇನ್ನಿತರ ಸಂದರ್ಭ ಹೆಚ್ಚಿನ ಒತ್ತಡ ಇಲಾಖೆಯಿಂದ ಇದ್ದ ಕಾರಣ ಈ ಕಡೆಗೆ ತಲೆ ಹಾಕಲು ಈ ಅಧಿಕಾರಿಗೆ ಪುರಸೊತ್ತು ಸಿಗದಂತಾಗಿದೆ. ಈ ಕಚೇರಿಗೆ ಮೂಲಭೂತ ಸೌಕರ್ಯ ಒದಗಿಸಿ ಕರ್ತವ್ಯ ನಿರ್ವಹಣೆಗೆ ಸೂಕ್ತ ಅವಕಾಶ ಕಲ್ಪಿಸದ ಕಾರಣ ಗ್ರಾಮ ಲೆಕ್ಕಿಗ ಅಧಿಕಾರಿಗೂ ಇಲ್ಲಿ ಕುಳಿತು ಕರ್ತವ್ಯವೆಸಗಲು ಅಸಾಧ್ಯವಾಗಿದೆ. ಕಟ್ಟಡದಲ್ಲಿ ಶೌಚಾಲಯ ಸೇರಿದಂತೆ ಇನ್ನಿತರ ಸೌಕರ್ಯವಿಲ್ಲದೆ ಭೇಟಿ ನೀಡುವ ಮಹಿಳೆಯರೂ ಸೇರಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಕುಂದು ಕೊರತೆ ಹಾಗೂ ನಿರ್ವಹಣೆ ಬಗ್ಗೆ ಮೇಲಾಧಿಕಾರಿಗಳಗಮನಕ್ಕೆ ಇಲ್ಲಿಯ ಗ್ರಾಮ ಲೆಕ್ಕಿಗರು ತಂದಿದ್ದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.