ಲೈಂಗಿಕ ಶಿಕ್ಷಣ ಕಡ್ಡಾಯ: ಡಾ. ಅಶೋಕ್
ಉಡುಪಿ: ಲೈಂಗಿಕ ಶಿಕ್ಷಣ ನೀಡಿದ ಶಾಲೆಗಳಿರುವ ಪ್ರದೇಶದಲ್ಲಿ ಗಣನೀಯವಾಗಿ ಅತ್ಯಾಚಾರದಂತಹ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಿವೆ. ಆದ್ದರಿಂದ ನಮ್ಮ ದೇಶದಲ್ಲಿ ಕಡ್ಡಾಯವಾಗಿ ಪ್ರೌಢಶಾಲೆ ಹಂತದಲ್ಲಿಯೇ ಲೈಂಗಿಕ ಶಿಕ್ಷಣ ನೀಡಬೇಕು ಎಂದು ಮನೋವೈದ್ಯ, ರಾಜ್ಯ ಮಾನಸಿಕ ಆರೋಗ್ಯ ಕಾರ್ಯಪಡೆ ಅಧ್ಯಕ್ಷ ಡಾ.ಕೆ.ಎ. ಅಶೋಕ್ ಪೈ ಅಭಿಪ್ರಾಯಪಟ್ಟಿದ್ದಾರೆ.
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಕಾರ್ಯಪಡೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಶಾಲೆ, ಕಾಲೇಜು ಹಂತದಲ್ಲಿಯೇ ಲೈಂಗಿಕ ಶಿಕ್ಷಣ ಮತ್ತು ಶಾಲೆ ಮಕ್ಕಳಿಗೆ ಲೈಂಗಿಕ ಸಮಸ್ಯೆಗಳ ಬಗ್ಗೆ ಆಪ್ತ ಸಮಾಲೋಚನೆ ನಡೆಸುವುದಕ್ಕಾಗಿಯೇ ಶಿಕ್ಷಕರಿಗೆ ಆಪ್ತ ಸಮಾಲೋಚನಾ ತರಬೇತಿ ನೀಡುವ ಅಗತ್ಯ ಇದೆ. ಈ ಬಗ್ಗೆ ಕಾರ್ಯಪಡೆ ವತಿಯಿಂದ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದವರು ಹೇಳಿದರು.
ಜಿಲ್ಲಾಸ್ಪತ್ರೆಗಳಲ್ಲಿ ಮಾನಸಿಕ ಆರೋಗ್ಯ ಕೇಂದ್ರ: ಜಿಲ್ಲಾ ಕೇಂದ್ರಗಳಲ್ಲಿ 40- 50 ಹಾಸಿಗೆಗಳ ಮಾನಸಿಕ ರೋಗ ಚಿಕಿತ್ಸಾ- ಪಾಲನಾ ಕೇಂದ್ರಗಳನ್ನು ಸರ್ಕಾರಿ, ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಬೇಕು, ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ಮಾನಸಿಕ ರೋಗ ಚಿಕಿತ್ಸಾ ಘಟಕಗಳನ್ನು ಆರಂಭಿಸಬೇಕು, ಕೇಂದ್ರ ಸರ್ಕಾರ ನೀಡುವ ವಾರ್ಷಿಕ ರು. 2 ಕೋಟಿ ಅನುದಾನದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಕೇಂದ್ರಗಳನ್ನು ಆರಂಭಿಸಬೇಕು, ಅತ್ಯಾಚಾರ, ಆತ್ಮಹತ್ಯೆ ಇತ್ಯಾದಿಗಳ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಮಾಧ್ಯಮಗಳಿಗೆ ಕಾರ್ಯಾಗಾರ ನಡೆಸಬೇಕು ಎಂಬ ಶಿಫಾರಸುಗಳನ್ನು ಕೂಡ ಸರ್ಕಾರಕ್ಕೆ ಮಾಡಲಾಗುವುದು ಎಂದರು.
ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಚಂದ್ರ ಬಾಯರಿ, ಜಿಲ್ಲಾಸ್ಪತ್ರೆ ಸರ್ಜನ್ ಡಾ. ಆನಂದ ನಾಯಕ್ ಇದ್ದರು.
40 ಸಾವಿರ ಮನೋ ಚಿಕಿತ್ಸಕರು ಬೇಕು: ಜಾಗತಿಕ ಮಾನದಂಡಗಳ ಪ್ರಕಾರ 1,10,000 ಜನರಿಗೆ 4 ಮಂದಿ ಮನೋರೋಗ ಚಿಕಿತ್ಸಕರು (ಮನೋವೈದ್ಯ, ಮನೋವಿಜ್ಞಾನಿ, ಮನೋ ಸಮಾಜಿಕ ಕಾರ್ಯಕರ್ತ, ಮನೋರೋಗ ಶಿಶ್ರೂಷಕಿ) ಬೇಕು. ಅಂದರೆ ಭಾರತದ 110 ಕೋಟಿ ಜನಸಂಖ್ಯೆಗೆ 40 ಸಾವಿರ ಮನೋರೋಗ ಚಿಕಿತ್ಸಕರ ಅಗತ್ಯ ಇದೆ. ಆದರೆ ಪ್ರಸ್ತುತ ನಮ್ಮ ದೇಶದಲ್ಲಿ ಕೇವಲ 8 ಸಾವಿರ ಮಂದಿ ಮನೋರೋಗ ಚಿಕಿತ್ಸಕರು (4000 ಮನೋವೈದ್ಯರು, 2000 ಮನೋಚಿಕಿತ್ಸಕರು, 2000 ಮಾನಸಿಕ ಸಮಾಜಿಕ ಕಾರ್ಯಕರ್ತರು) ಇದ್ದಾರೆ ಎಂದು ಅಶೋಕ್ ಪೈ ತಿಳಿಸಿದರು.