ಭಾರಿ ಮಳೆ: ಕುದ್ಪಾಜೆ ಸೇತುವೆ ಬಿರುಕು
ಸುಳ್ಯ: ಈ ವಾರದ ಸುರಿದ ಭಾರಿ ಮಳೆಗೆ ಜಟ್ಟಿಪಳ್ಳದಿಂದ ಕೊಡಿಯಾಲಬೈಲು ಮೂಲಕ ದುಗಲಡ್ಕಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಕುದ್ಪಾಜೆ ಎಂಬಲ್ಲಿರುವ ಸೇತುವೆ ಬಿರುಕು ಬಿಟ್ಟಿದ್ದು ಆತಂಕ ಮೂಡಿಸಿದೆ. ಸೇತುವೆಯ ಒಂದು ಬದಿಯಲ್ಲಿ ದೊಡ್ಡ ಹೊಂಡ ನಿರ್ಮಾಣವಾಗಿ ಬಿರುಕು ಬಿಟ್ಟಿರುವುದರಿಂದ ದ್ವಿಚಕ್ರವಾಹನಗಳು ಮಾತ್ರ ಒಂದು ಬದಿಯಿಂದ ಸಂಚರಿಸುತ್ತಿವೆ. ಅವನ್ನು ಬಿಟ್ಟರೆ ಇತರ ವಾಹನಗಳಿಗೆ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಸೇತುವೆ ಅಡಿ ಭಾಗ ಕೂಡಾ ಕುಸಿದಿದ್ದು ಅಪಾಯದಲ್ಲಿದೆ. ಈ ಸೇತುವೆಯ ಪುನರ್ ನಿರ್ಮಾಣಕ್ಕೆ ನ ಪಂ ನಗರೋತ್ಥಾನ ಯೋಜನೆಯಡಿ ರು. 15 ಲಕ್ಷ ಇರಿಸಲಾಗಿತ್ತು. ಅದರ ಕಾಮಗಾರಿ ಈ ಮಳೆಗಾಲದ ಮೊದಲು ನಡೆಯಬೇಕಾಗಿತ್ತು. ಆದರೆ ಇದುವರೆಗೆ ಆರಂಭವಾಗಿಲ್ಲ. ಅಲ್ಲದೆ ರು. 15 ಲಕ್ಷದಲ್ಲಿ ಸಣ್ಣ ಸೇತುವೆ ನಿರ್ಮಾಣವಷ್ಟೇ ಸಾಧ್ಯ. ಇಲ್ಲಿ 7 ಮೀಟರ್ ಅಗಲದ ರಸ್ತೆ ಬೇಕಾಗಿರುವುದರಿಂದ ರು. 40 ಲಕ್ಷ ಇರಿಸಿ ಸೇತುವೆ ನಿರ್ಮಾಣದ ವ್ಯವಸ್ಥೆ ಮಾಡುವುದಾಗಿ ಎರಡು ತಿಂಗಳ ಹಿಂದೆ ಶಾಸಕರು ಹೇಳಿದ್ದರು.