ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ರಾಷ್ಟ್ರೀಯತೆ ಕೊರತೆಯಿಂದ ಗಡಿ ಅಭದ್ರತೆ: ಆಚಾರ್ಯ

Rashmi Kasaragodu
Updated On : 29 Jul 2014, 11:31 am

ಮಂಗಳೂರು: 'ಭಾರತದ ಗಡಿಪ್ರದೇಶದಲ್ಲಿ ರಾಷ್ಟ್ರೀಯತೆ ಭಾವನೆಯ ಕೊರತೆ ಇರುವುದರಿಂದ ದೇಶದ ಭದ್ರತೆಗೆ ಅಪಾಯವಿದೆ' ಎಂದು ನಾಗಾಲ್ಯಾಂಡ್ ರಾಜ್ಯಪಾಲ ಪದ್ಮನಾಭ ಬಾಲಕೃಷ್ಣ ಆಚಾರ್ಯ ಹೇಳಿದ್ದಾರೆ.
 ಸೋಮವಾರ ನಗರದ ಸಂಘನಿಕೇತನ ಸಭಾಂಗಣದಲ್ಲಿ ನಡೆದ ಶ್ರೀ ಪದ್ಮನಾಭ ಆಚಾರ್ಯ ನಾಗರಿಕ ಸನ್ಮಾನ ಸಮಿತಿ ವತಿಯಿಂದ ನಾಗರಿಕ ಸನ್ಮಾನವನ್ನು ಪತ್ನಿ ಕವಿತಾ ಆಚಾರ್ಯರೊಂದಿಗೆ ಸ್ವೀಕರಿಸಿ ಮಾತನಾಡಿದರು.  ಗಡಿ ಪ್ರದೇಶಗಳಾದ ನಾಗಾಲ್ಯಾಂಡ್, ಅಸ್ಸಾಂ, ನೇಪಾಳ, ಮಣಿಪುರಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಇಲ್ಲಿ ಜನರು ತಮ್ಮನ್ನು ಭಾರತೀಯರೆಂದು ಗುರುತಿಸಿಕೊಳ್ಳುತ್ತಿಲ್ಲ. ಪ್ರತ್ಯೇಕವಾದದ ಮುಷ್ಟಿಯಲ್ಲಿ ಜನರು ಬದುಕುತ್ತಿದ್ದು, ಇದು ದೇಶವನ್ನೇ ಅಪಾಯ ಸ್ಥಿತಿಗೆ ತರಬಹುದು. ಆದ್ದರಿಂದ ಯುವಜನತೆ, ಯುವ ಸಂಘಟನೆಗಳು ಇಲ್ಲಿಯ ಜನರಲ್ಲಿ ದೇಶದ ಬಗ್ಗೆ ಅಭಿಮಾನ ಮೂಡಿಸುವ ವಾತಾವರಣ ಸೃಷ್ಟಿಸಬೇಕಾಗಿದೆ ಎಂದರು.
ಮಣಿಪುರ, ನಾಗಾಲ್ಯಾಂಡ್, ಸಿಕ್ಕಿಂ, ಮೇಘಾಲಯ ಪ್ರದೇಶ ಸಂಪತ್ಭರಿತವಾಗಿ ಬಲಿಷ್ಟವಾಗಿದೆ. ಆದರೆ ಗಡಿ ಪ್ರದೇಶಗಳು ಮೂಲ ಸೌಕರ್ಯಗಳಿಂದ ವಂಚಿತಗೊಂಡಿದೆ. ಇದು ಪ್ರತ್ಯೇಕವಾದದಕ್ಕೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಗಡಿ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸಿದ್ದು, ಯುವಜನತೆ ಈ ನಿಟ್ಟಿನಲ್ಲಿ ಕಾರ್ಯಾಚರಿಸುವುದು ಉತ್ತಮ ಎಂದರು.
 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವವಿದ್ಯಾಲಯ ಕುಲಪತಿ ವಿನಯ ಹೆಗ್ಡೆ ಮಾತನಾಡಿ, ಈಶಾನ್ಯ ಪ್ರದೇಶದ ವಿದ್ಯಾರ್ಥಿಗಳಿಗೆ ದ.ಕ. ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳು ಶಿಕ್ಷಣದಲ್ಲಿ ಶೇ. 5 ಮೀಸಲಾತಿ ನೀಡಿದರೆ ಉನ್ನತ ವಿದ್ಯಾಭ್ಯಾಸ ನೀಡಲು ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡರೆ ಉತ್ತಮ. ದೇಶದ ರಕ್ಷಣೆ ಕೇವಲ ಸಂಘಟನೆಗಳ ಜವಾಬ್ದಾರಿಯಲ್ಲ ಭಾರತೀಯರಾದ ಎಲ್ಲರ ಪಾಲೂ ಇದೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್, ಸಮಿತಿ ಗೌರವಾಧ್ಯಕ್ಷ ಎಂ. ಪದ್ಮನಾಭ್ ಪೈ, ಉಪಾಧ್ಯಕ್ಷರಾದ ಡಾ.ಎಂ.ಬಿ. ಪುರಾಣಿಕ್, ಹುಂಡಿ ಪ್ರಭಾ ಕಾಮತ್, ಮಾಜಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್, ನಾಗರಾಜ್ ಶೆಟ್ಟಿ, ಮೋನಪ್ಪ ಭಂಡಾರಿ, ಸಂಚಾಲಕ ಮಂಗಲ್ಪಾಡಿ ನರೇಶ್ ಶೆಣೈ ಇದ್ದರು. ವಿಧಾನಸಭೆ ಮಾಜಿ ಉಪಸಭಾಪತಿ ಎನ್. ಯೋಗಿಶ್ ಭಟ್ ಸ್ವಾಗತಿಸಿದರು, ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ಸಿಂಹ ನಾಯಕ್ ವಂದಿಸಿದರು. ನವನೀತ್ ಶೆಟ್ಟಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement