ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬೆಳ್ತಂಗಡಿ: ಬಿಜೆಪಿ ಕಾರ್ಯಕರ್ತರಿಗೆ, ಮತದಾರರಿಗೆ ಅಭಿನಂದನೆ

Mainashree
Updated On : 2 Jun 2014, 11:39 am

ಬೆಳ್ತಂಗಡಿ: ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಈಗಾಗಲೇ ಕಾಂಗ್ರೆಸ್ ಮುಕ್ತವಾಗುತ್ತಿದ್ದು, ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯೂ ಕೂಡ ಮುಂದಿನ 5 ವರ್ಷಗಳಲ್ಲಿ ಕಾಂಗ್ರೆಸ್ ಇಲ್ಲವಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಭವಿಷ್ಯ ನುಡಿದಿದ್ದಾರೆ.
ಭಾನುವಾರ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ  ಅಭೂತಪೂರ್ವ ಗೆಲವಿಗಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಅಭಿನಂದನಾ ಕಾರ್ಯಕ್ರಮ ಮತ್ತು ವಿಜಯೋತ್ಸವದಲ್ಲಿ ಅವರು ಮಾತನಾಡಿದರು. ನನ್ನ ಗೆಲವು ನನ್ನದಲ್ಲ. ಅದು ನಿಮ್ಮ ಗೆಲವು. ಈ ವಿಜಯವನ್ನು ನಾನು ಕಾರ್ಯಕರ್ತರ ಪಾದಗಳಿಗೆ ಸಮರ್ಪಿಸುತ್ತಿದ್ದೇನೆ. ಈ ಚುನಾವಣೆಯಲ್ಲಿ ಮತದಾರ ಕಾರ್ಯಕರ್ತನಾಗಿದ್ದಾನೆ. ಪಕ್ಷದ ವಿಚಾರಧಾರೆಗೆ ವಿಶೇಷ ಬೆಂಬಲ ವ್ಯಕ್ತವಾಗಿದೆ. ಸಂಸದನಾಗಿ ಮತ್ತೊಮ್ಮೆ ಆಯ್ಕೆಯಾಗಿದ್ದೇನೆ. ಈ ಜವಾಬ್ದಾರಿಯ ಅರಿವಿನ ಮಧ್ಯೆ ಮುಂದಿನ ವರ್ಷಗಳಲ್ಲಿ ದ.ಕ.ವನ್ನು ಒಂದನೇ ಸ್ಥಾನದತ್ತ ಕೊಂಡೊಯ್ಯುವ ಎಲ್ಲಾ ಪ್ರಯತ್ನ ಮಾಡುತ್ತೇನೆ ಎಂದರು.
ಸಜ್ಜನಿಕೆ ರಾಜಕಾರಣ: ಸಾರ್ಕ್ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸುವುದರ ಮೂಲಕ ನರೇಂದ್ರ ಮೋದಿ ತಾನು ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಮೋದಿಯವರ ಆದರ್ಶದಲ್ಲಿ, ಮಾರ್ಗದರ್ಶನದಲ್ಲಿ ಕ್ರಿಯಾಶೀಲ, ಸಜ್ಜನಿಕೆಯ ರಾಜಕಾರಣವೇ ನನ್ನ ಮುಂದಿನ ಗುರಿ.
ಇದೇ ವೇಳೆ ನಳಿನ್‌ಗೆ ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.
 ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ ಸಿಂಹ ನಾಯಕ್, ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿ.ಪಂ. ಅಧ್ಯಕ್ಷ ಕೊರಗಪ್ಪ ನಾಯ್ಕ, ತಾ.ಪಂ. ಅಧ್ಯಕ್ಷ ಕೇಶವ ಎಂ., ಯುವ ಮೋರ್ಚಾ ಜಿಲ್ಲಾಧ್ಯಕ್ಷ ರಂಜನ್ ಜಿ. ಗೌಡ, ಪಕ್ಷದ ಜಿಲ್ಲಾ ಕಾರ್ಯದರ್ಶಿ ಶಾರದಾ ರೈ, ತಾಲೂಕು ಪ್ರಧಾನ ಕಾರ್ಯದರ್ಶಿ ಮಹಾಬಲ ಗೌಡ ಇದ್ದರು.
ನಾರಾವಿ ಗ್ರಾ.ಪಂ.ನಲ್ಲಿ ಎರಡು ದಿನಗಳ ಹಿಂದೆ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಬಿಜೆಪಿ ಬೆಂಬಲಿತ ಸದಸ್ಯೆ ಲಕ್ಷ್ಮೀ, ಹಾಲು ಉತ್ಪಾದಕರ ಒಕ್ಕೂಟಕ್ಕೆ ನಿರ್ದೇಶಕರಾಗಿ ಆಯ್ಕೆಗೊಂಡ ಪದ್ಮನಾಭ ಅರ್ಕಜೆ ಇವರನ್ನು ಗೌರವಿಸಲಾಯಿತು. ನಾರಾವಿ ಪಂಚಾಯಿತಿ ಸದಸ್ಯೆ ಸುಮಿತ್ರಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. ನಂದ ಕುಮಾರ್ ನಿರ್ವಹಿಸಿದರು. ತಾ.ಪಂ. ಸದಸ್ಯೆ ಚೇತನಾ ಚಂದ್ರಶೇಖರ್ ವಂದೇ ಮಾತರಂ ಹಾಡಿದರು. ಪಕ್ಷದ ತಾಲೂಕಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಯಂತ ಕೋಟ್ಯಾನ್ ವಂದಿಸಿದರು.
ಇದಕ್ಕೂ ಮೊದಲು ಲಾಯಿಲ ವಿಘ್ನೇಶ್ವರ ಕಲಾ ಮಂದಿರದ ಬಳಿಯಿಂದ ಮಂಜುನಾಥ ಕಲಾಭವನದರೆಗೆ ಬೃಹತ್ ಮೆರವಣಿಗೆ ನಡೆಯಿತು. ತೆರೆದ ಜೀಪಿನಲ್ಲಿ ಸಂಸದರನ್ನು ಕರೆತರಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement