ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಖಾಸಗಿ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವನೆ: ಶೇಕಡವಾರು ಬೇಡ, ಟಿಕೆಟ್ ಮೇಲೆ ಸ್ವಲ್ಪ ಸಾಕು

Mainashree
Updated On : 4 Jun 2014, 10:50 am

ಮಂಗಳೂರು: ನಗರದಲ್ಲಿ ಸಿಟಿ ಖಾಸಗಿ ಬಸ್ ಪ್ರಯಾಣದರ ಹೆಚ್ಚಳ ಮಾಡುವುದಿದ್ದರೆ ಶೇಕಡಾವಾರು ಮಾಡದೆ ಪ್ರತಿ ಟಿಕೆಟ್ ಮೇಲೆ ಒಂದು ರುಪಾಯಿ ಹೆಚ್ಚಿಸಿದರೆ ಸಾಕು. ಇದರಿಂದ ಪ್ರಯಾಣಿಕರಿಗೆ ಅಷ್ಟಾಗಿ ಹೊರೆಯಾಗದು. ಬಡ ಹಾಗೂ ಮಧ್ಯಮ ವರ್ಗ ಪ್ರಯಾಣಿಕರ ಹಿತವನ್ನು ಲಕ್ಷ್ಯದಲ್ಲಿರಿಸಿ ಪ್ರಯಾಣದರ ಏರಿಕೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಇಂಧನ ದರ ಹೆಚ್ಚಳ ಮತ್ತು ಬಸ್‌ನ ಬಿಡಿಭಾಗಗಳ ದರ ಹೆಚ್ಚಳದಿಂದ ಪ್ರಯಾಣ ದರದಲ್ಲಿ ಶೇ.8 ಜಾಸ್ತಿ ಮಾಡುವಂತೆ ಖಾಸಗಿ ಬಸ್ ಮಾಲಕರು ಸಾರಿಗೆ ಪ್ರಾಧಿಕಾರವನ್ನು ನಿವೇದಿಸಿಕೊಂಡರು. ಇದನ್ನು ವಿರೋಧಿಸಿ ನಾಗರಿಕ ಹಿತರಕ್ಷಣಾ ವೇದಿಕೆ ಸಂಚಾಲಕ ಹನುಮಂತ ಕಾಮತ್, ಸಾರಿಗೆ ಪ್ರಾಧಿಕಾರದ ಅನುಮತಿ ಇಲ್ಲದೆ ಕಳೆದ ವಾರ ದರ ಪರಿಷ್ಕರಿಸಿದ್ದಾರೆ. ಎರಡ್ಮೂರು ದಿನ ಪ್ರಯಾಣಿಕರು ದುಬಾರಿ ದರ ತೆತ್ತು ಪ್ರಯಾಣಿಸಿದ್ದಾರೆ. ದರ ಏರಿಕೆಗೆ ಸಾರಿಗೆ ಪ್ರಾಧಿಕಾರದ ಅನುಮತಿ ಅಗತ್ಯವಿಲ್ಲ ಎನ್ನುವ ಬಸ್ ಮಾಲಕರು, ತುರ್ತು ನಿರ್ಗಮನ ದ್ವಾರ ಅಳವಡಿಸಬೇಕೆಂಬ ಆದೇಶವನ್ನು ಯಾಕೆ ಜಾರಿಗೊಳಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಇನ್ನು ಮೂರು ದಿನದಲ್ಲಿ ದರ ಪರಿಷ್ಕರಣೆ ಬಗ್ಗೆ ಪರಿಶೀಲನೆ ನಡೆಸುವುದಾಗಿ ಜಿಲ್ಲಾಧಿಕಾರಿ ಇಬ್ರಾಹಿಂ ಭರವಸೆ ನೀಡಿದರು.
ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕಾರ್ಡ್: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫಾರಂಗೆ ಖಾಸಗಿ ಮಾಲಕರು ರು. 100 ದುಬಾರಿ ಮೊತ್ತ ಪಡೆಯುವ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ಬಸ್‌ನ್ನು ಶಾಲಾ ಮಕ್ಕಳಿರುವಲ್ಲಿ ನಿಲ್ಲಿಸದೆ ಹೋಗುತ್ತಾರೆ. ಇದರಿಂದ ಶಾಲೆಗೆ ತೆರಳಲು ತೊಂದರೆಯಾಗುತ್ತಿದೆ ಎಂದು ಇಮ್ತಿಯಾಜ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಸ್ ಮಾಲಕರ ಸಂಘದ ರಾಜವರ್ಮ ಬಲ್ಲಾಳ್, ಖಾಸಗಿ ಬಸ್‌ನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಕಾರ್ಡ್ ಮಾದರಿಯಲ್ಲಿ ಆರ್‌ಎಫ್‌ಐ ಕಾರ್ಡ್ ನೀಡಲಾಗುವುದು. ಅದಕ್ಕೆ ಚಿಪ್ ಅಳವಡಿಸಲಿದ್ದು, ಚಿಪ್‌ನ್ನು ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರ ಬಳಿ ಹಿಡಿದಾಗ ಟಿಕೆಟ್ ಬರುತ್ತದೆ. ಶಾಲಾ ಗುರುತಿನ ಚೀಟಿ ತೋರಿಸಿ ಬೇರೆ ಕಡೆ ತೆರಳುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಕಾರ್ಡ್ ನೀಡಲು ರು. 50 ವೆಚ್ಚವಾಗುತ್ತದೆ. ಇತರೆ ವೆಚ್ಚ ಸೇರಿ ರು. 100 ಪಡೆಯುತ್ತೇವೆ ಎಂದರು. ಮೊತ್ತ ಕಡಿಮೆ ಮಾಡುವಂತೆ ಜಿಲ್ಲಾಧಿಕಾರಿ ಇಬ್ರಾಹಿಂ ಸೂಚಿಸಿದರು.  ಬಸ್ ಪ್ರಯಾಣದರ ಪರಿಷ್ಕೃತಗೊಂಡ ಬಳಿಕ ದರಪಟ್ಟಿಯನ್ನು ಬಸ್‌ನಲ್ಲಿ ಪ್ರದರ್ಶಿಸಬೇಕು. ಬಸ್ ಚಾಲಕ, ನಿರ್ವಾಹಕರ ಮಧ್ಯೆ ಮಾಲಕರ ಹೊಂದಾಣಿಕೆ ಉತ್ತಮವಾಗಿರಬೇಕು. ಯಾವುದೇ ಕಾರಣಕ್ಕೂ ಸಾರಿಗೆ ಪ್ರಾಧಿಕಾರದ ಅನುಮತಿ ವಿನಃ ದರ ಹೆಚ್ಚಳ ಮಾಡಬಾರದು ಎಂದು ಹೇಳಿದರು. ಖಾಸಗಿ ಬಸ್‌ಗಳಲ್ಲಿನ ಕುಂದುಕೊರತೆ ಬಗ್ಗೆ ಬಸ್ ಮಾಲಕರಿಗೆ ಅಥವಾ ಆರ್‌ಟಿಒಗೆ ದೂರು ನೀಡಬಹುದು ಎಂದರು.
ವೇದಿಕೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಪ್ರಾದೇಶಿಕ ಸಾರಿಗೆ ಅಧಿಕಾರಿ ಅಫ್ಜಲ್ ಅಹ್ಮದ್‌ಖಾನ್, ಜಿಲ್ಲಾ ಎಸ್ಪಿ ಡಾ.ಶರಣಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement