ಬಳೆಂಜ ದೇವಳ ದೃಢ ಸಂಪ್ರೋಕ್ಷಣೆ
ಬೆಳ್ತಂಗಡಿ: ಬಳೆಂಜದ ಶ್ರೀ ಪಂಚಲಿಂಗೇಶ್ವರ, ಶ್ರೀ ದುರ್ಗಾಪರಮೇಶ್ವರೀ ಹಾಗೂ ಪರಿವಾರ ದೇವರ ಸನ್ನಿಧಾನದಲ್ಲಿ ಸೋಮವಾರ ಮತ್ತು ಮಂಗಳವಾರ ದೃಢ ಸಂಪ್ರೋಕ್ಷಣೆ ಕಾರ್ಯಕ್ರಮ ನೆರವೇರಿತು.
ಮಂಗಳವಾರ ಬೆಳಗ್ಗೆ ದೃಢ ಸಂಪ್ರೋಕ್ಷಣೆ, ಕಲಶಾಭಿಷೇಕ, ಪ್ರಧಾನ ಹೋಮ, ಗಣಹೋಮ, ಪ್ರಸನ್ನ ಪೂಜೆ, ಮಹಾ ಪೂಜೆ ನಡೆದವು. ಪೂರ್ವಾಹ್ನ ಅಭಿನಂದನಾ ಕಾರ್ಯಕ್ರಮ ನಡೆಯಿತು. ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ ಅಜಿಲ ಅವರು ಮಾತನಾಡಿ ಆತ್ಮಕಲ್ಯಾಣಕ್ಕಾಗಿ, ಗ್ರಾಮ ಸುಭಿಕ್ಷೆಗಾಗಿ ದೇಗುಲದ ನಿರ್ಮಾಣವಾಗಿದೆ. ಇದನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದ ಅವರು ಕಳೆದ ಏ.5ರಿಂದ 9ರವರೆಗೆ ನಡೆದ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ಹಗಲಿರುಳು ದುಡಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಉಜಿರೆ ಶ್ರೀ ಧ.ಮಂ. ಕಾಲೇಜಿನ ಪ್ರಾಧ್ಯಾಪಕ ಬಿ.ಎ. ಕುಮಾರ ಹೆಗ್ಡೆ ಅಭಿನಂದನಾ ಭಾಷಣ ಮಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಕೀಲ ಹರೀಶ್ ಪೂಂಜ, ಕಾರ್ಯಾಧ್ಯಕ್ಷ ಧರ್ಣಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಪಿ.ಕೆ, ಆನುವಂಶೀಯ ಆಡಳಿತ ಮೊಕ್ತೇಸರ ಉದಯವರ್ಮ ಪಡಿವಾಳ್ ಇದ್ದರು.
ಬಾಲಕೃಷ್ಣ ಶೆಟ್ಟಿ ಕುರೆಲ್ಯ ಬ್ರಹ್ಮಕಲಶೋತ್ಸವದ ವಿವರವಾದ ಲೆಕ್ಕಪತ್ರವನ್ನು ವಾಚಿಸಿದರೆ, ದಿನೇಶ್ ಪಿ.ಕೆ. ಜೀರ್ಣೋದ್ಧಾರ ಕಾರ್ಯದ ವಿವರವಾದ ಆಯ- ವ್ಯಯವನ್ನು ವಾಚಿಸಿದರು. ಅಶ್ವತ್ಥ್ ಹೆಗ್ಡೆ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಶ್ರೇಯಾ ಹೆಗ್ಡೆ ಪ್ರಾರ್ಥಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಅನಿಲ್ ನಾಯ್ಕ ವಂದಿಸಿದರು.