' 9 ಲಕ್ಷ ಬಾಕಿ ವಸೂಲಿಗಾಗಿ ಪಂಪ್ಹೌಸ್ಗೆ ಬೀಗ'
ಬಂಟ್ವಾಳ: ರಾಯಿ ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರಿಂದ ರು. 9 ಲಕ್ಷ ಬಿಲ್ ಬಾಕಿ ಇದೆ. ಇದರ ವಸೂಲಾತಿಗಾಗಿ ಪಂಪ್ಹೌಸ್ಗೆ ಬೀಗ ಜಡಿಯುವಂತಹ ಕಠಿಣ ಕ್ರಮ ಅನಿವಾರ್ಯವಾಯ್ತು ಎಂದು ರಾಯಿ ಗ್ರಾಮ ಪಂಚಾಯಿತಿ ಅಭಿವೃದ್ಧಿಅಧಿಕಾರಿ ವೆಂಕಟೇಶ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಪ್ಹೌಸ್ಗೆ ಬೀಗ ಜಡಿದ ಕಾರಣಕ್ಕೆ ತನ್ನ ವಿರುದ್ಧ ಬಂದ ಆರೋಪಗಳಿಗೆ ಪ್ರತಿಕ್ರಿಯಿಸಿದರು. ನೀರಿನ ಬಿಲ್ ಬಾಕಿ ಇಟ್ಟವರ ಪಟ್ಟಿಯನ್ನು ಮಾಧ್ಯಮಗಳೆದುರು ಪ್ರದರ್ಶಿಸಿದರು. ಗ್ರಾಮದಲ್ಲಿ ಒಟ್ಟು 1009 ನೀರಿನ ಕನೆಕ್ಷನ್ಗಳಿದ್ದು, 15 ಮಂದಿ ಪಂಪ್ ಆಪರೇಟರ್ಗಳಿದ್ದಾರೆ. 30 ಪಂಪ್ ಹೌಸ್ಗಳನ್ನು ನಿರ್ವಹಿಸಬೇಕಾಗಿದ್ದು, ಪ್ರತಿ ತಿಂಗಳು ರು. 75,675 ಸಂಗ್ರಹವಾಗಬೇಕು. ಆದರೆ ಗ್ರಾಮಸ್ಥರ ಸ್ಪಂದನ ಇಲ್ಲದ ಕಾರಣ ನೀರಿನ ಬಿಲ್ ಬಾಕಿಯಾಗಿದೆ. ಇದರಿಂದ ನೀರಿನ ನಿರ್ವಹಣೆ ಅಸಾಧ್ಯವಾಗಿದ್ದು, ನಿರ್ದಾಕ್ಷಿಣ್ಯ ಕ್ರಮ ಜರುಗಿಸುವ ಕುರಿತು ಪಂಚಾಯಿತಿ ಕೈಗೊಂಡ ನಿರ್ಣಯದಂತೆ ಕ್ರಮ ಜರುಗಿಸಲಾಗಿದೆ ಎಂದರು. ಗ್ರಾ.ಪಂ. ಉಪಾಧ್ಯಕ್ಷ ಆನಂದ, ಸದಸ್ಯರಾದ ಅಶ್ರಫ್, ಹನೀಫ್ ಹಾಗೂ ಲೆಕ್ಕ ಸಹಾಯಕಿ ವಾಯ್ಲೆಟ್ ಮಿನೆಜಸ್ ಇದ್ದರು.