ಅನಧಿಕೃತ ಕಟ್ಟಡ ರಚನೆ ತೆರವಿಗೆ ಸುಭಾಸ್ ಗಡುವು
ಮಂಗಳೂರು: 'ಇದು ಲೋಕಾಯುಕ್ತ ಆದೇಶ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿರುವ ಕಟ್ಟಡಗಳನ್ನು ತೆರವುಗೊಳಿಸಲು 4 ತಿಂಗಳ ಗಡುವು ವಿಧಿಸಲಾಗಿದೆ. ಇದನ್ನು ಪಾಲಿಸದಿದ್ದರೆ ಪಾಲಿಕೆ ಹಾಗೂ ನಗರ ಯೋಜನಾ ಪ್ರಾಧಿಕಾರ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ'. ಇದು ಮಹಾನಗರ ಪಾಲಿಕೆಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಸುಭಾಸ್ ಅಡಿ ನೀಡಿದ ಎಚ್ಚರಿಕೆ. ಶನಿವಾರ ಪುರಭವನದಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆಯೇ ಅನಧಿಕೃತ ರಚನೆಗೆ ತೆರವಿಗೆ ಆದೇಶ ನೀಡಿದರೂ ಪಾಲಿಕೆ ಕ್ರಮ ಕೈಗೊಂಡಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ನ್ಯಾಯಮೂರ್ತಿ ಸುಭಾಸ್ ಅಡಿ ನೀಡಿದ ಉತ್ತರ ಇದು. ತಾನು ಸಾರ್ವಜನಿಕ ಹಿತಾಸಕ್ತಿ ನೆಲೆಯಲ್ಲಿ ಈ ಸೂಚನೆ ನೀಡಿದ್ದೇನೆ. ನಿಯಮ ಉಲ್ಲಂಘಿಸಿ ದೊಡ್ಡ ಕಟ್ಟಡಗಳು ತಲೆ ಎತ್ತಿದ್ದು, ಅವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದರು. ಉಡುಪಿ, ಪುತ್ತೂರು ಹಾಗೂ ಮಂಗಳೂರಲ್ಲಿ ಸಾರ್ವಜನಿಕ ದೂರು ಸ್ವೀಕರಿಸಿ ವಿಚಾರಣೆ ನಡೆಸಲಾಗಿದೆ. ಉಡುಪಿಯಲ್ಲಿ 120, ಪುತ್ತೂರಲ್ಲಿ 106 ಹಾಗೂ ಮಂಗಳೂರಲ್ಲಿ 79 ಹಳೆ ದೂರು ಮತ್ತು 40 ಹೊಸ ದೂರು ವಿಚಾರಣೆ ನಡೆಸಲಾಗಿದೆ ಎಂದರು. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ, ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ, ಜಿಲ್ಲಾ ಎಸ್ಪಿ ಡಾ.ಶರಣಪ್ಪ ಇದ್ದರು.