ಕಟೀಲು: ಪ್ರತಿ ಶುಕ್ರವಾರ ದೇವರ ಸೀರೆ ಏಲಂ
ಮೂಲ್ಕಿ: ಜಿಲ್ಲೆಯಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಹರಕೆಯ ರೂಪದಲ್ಲಿ ವರ್ಷಕ್ಕೆ ಸುಮಾರು 30,000 ಸೀರೆಗಳು ಬರುತ್ತಿದ್ದು ಸೀರೆಗಳನ್ನು ದಾಸ್ತಾನು ಇಡಲು ಅಸಾಧ್ಯವಾದ ಕಾರಣ ಇದೀಗ ಪ್ರತಿ ಶುಕ್ರವಾರ ಏಲಂ ಮೂಲಕ ಸೀರೆಗಳನ್ನು ವಿಲೇವಾರಿ ಮಾಡುವ ಕಾರ್ಯ ನಡೆಯುತ್ತಿದೆ.
ಈಗಾಗಲೇ ದೇವಿಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನದ ಹರಕೆಯನ್ನು ಕೊಡುತ್ತಿರುವುದರಿಂದ ಆರನೇ ಮೇಳವನ್ನು ಆರಂಭಿಸಲಾಗಿದ್ದು, ಇನ್ನು ಮುಂದಿನ ದಿನಗಳಲ್ಲಿ ಹತ್ತರಿಂದ ಹದಿನೈದು ವರ್ಷದವರೆಗೆ ಮುಂಗಡ ಬುಕ್ಕಿಂಗ್ ಹೊಂದಿದೆ.
ಕಟೀಲು ದೇವಳಕ್ಕೆ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ ಹರಕೆ ಹೇಳುತ್ತಿದ್ದು, ಅದರಂತೆ ಸೀರೆ ಮತ್ತಿತರ ರೂಪದಲ್ಲಿ ಹರಕೆ ನೀಡುತ್ತಾರೆ. ಪ್ರತಿ ವರ್ಷ ಸುಮಾರು 30,000 ಸೀರೆಗಳ ಸಂಗ್ರಹವಾಗುತ್ತಿದ್ದು ಪ್ರತಿ ವರ್ಷ ನವರಾತ್ರಿಯ ಸಂದರ್ಭದಲ್ಲಿ ಲಲಿತಾ ಪಂಚಮಿಯಂದು ಸುಮಾರು 10,000 ಕ್ಕೂ ಹೆಚ್ಚು ಸೀರೆಗಳನ್ನು ಮಹಿಳೆಯರಿಗೆ ದೇವರ ಪ್ರಸಾದ ರೂಪದಲ್ಲಿ ವಿತರಣೆ ಮಾಡಲಾಗುತ್ತಿದೆ.
ವರ್ಷದಲ್ಲಿ ಯಕ್ಷಗಾನದ ಎಲ್ಲಾ ಆರು ಮೇಳಗಳಿಗೆ ಸುಮಾರು 1,000 ಸೀರೆ ನೀಡುತ್ತಿದ್ದು, ದೇವಳದಲ್ಲಿ ಅನ್ನದಾನ, ರಂಗಪೂಜೆ ಮುಂತಾದ ಸೇವೆ ನೀಡುವ ದಾನಿಗಳಿಗೆ ಸುಮಾರು 4,000 ಸೀರೆಗಳನ್ನು ನೀಡುತ್ತಿದ್ದಾರೆ. ಉಳಿದಂತೆ ದೇವಳಕ್ಕೆ ಆಗಮಿಸುವ ಗಣ್ಯರಿಗೆ, ದಾನಿಗಳಿಗೆ ಸೀರೆಗಳನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತಿದೆ. ಆದರೂ, ಹೆಚ್ಚಿನ ಸಂಖ್ಯೆಯಲ್ಲಿ ಸೀರೆಗಳು ಉಳಿಯುತ್ತಿದೆ.
ಈಗಾಗಲೇ ದೇವಳದ ನಾಲ್ಕು ಕೊಠಡಿಗಳಲ್ಲಿ ಸುಮಾರು 24,000 ಸೀರೆಗಳು ತುಂಬಿದ್ದು ಅದನ್ನು ಹಾಗೇಯೆ ಇಟ್ಟಲ್ಲಿ ಹಾಳಾಗುವ ಸಾಧ್ಯತೆಯಿದೆ. ಅದನ್ನು ಸದುಪಯೋಗ ಪಡಿಸುವ ನಿಟ್ಟಿನಲ್ಲಿ ದೇವಳದ ಆಡಳಿತ ಮಂಡಳಿಯು ಸೀರೆಗಳನ್ನು ಏಲಂ ಮಾಡುವ ಮೂಲಕ ಭಕ್ತರಿಗೆ ಹಂಚಲು ನಿರ್ಧರಿಸಿದೆ.
ಏಲಂ ಪ್ರಕ್ರಿಯೆ ಆರಂಭ: ಅದರಂತೆ ಮೇ 30 ರಂದು ಶುಕ್ರವಾರದಿಂದ ಬೆಳಗ್ಗೆಯಿಂದ ಸಂಜೆಯವರೆಗೆ ಸೀರೆಗಳನ್ನು ಏಲಂ ಮಾಡಲು ಆರಂಭಿಸಿದ್ದು ಮೇ 30ರಂದು 129 ಸೀರೆಗಳು ಏಲಂ ಆಗಿದೆ. ರು. 58,000 ಸಂಗ್ರಹವಾಗಿದೆ. ಜೂ 6ರಂದು 185 ಸೀರೆಗಳು ಏಲಂ ಆಗಿ ರು. 1,11,215 ಸಂಗ್ರಹವಾಗಿದೆ. ಇದರಲ್ಲಿ ಬಂದ ಹಣವನ್ನು ದೇವಳದ ಕಾರ್ಯಗಳಿಗೆ ವಿನಿಯೋಗಿಸಲು ನಿರ್ಧರಿಸಲಾಗಿದೆ.
ಸೀರೆಗಳ ದಾಸ್ತಾನು ಕಡಿಮೆಯಾಗುವ ತನಕ ಪ್ರತಿ ಶುಕ್ರವಾರ ಏಲಂ ಮುಂದುವರಿಸಲು ನಿರ್ಧರಿಸಲಾಗಿದೆ. ಭಕ್ತರಿಗೆ ದೇವಿಯ ಹರಕೆಯ ಸೀರೆ ಪಡೆಯುವ ಭಾಗ್ಯ ದೊರೆತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸೀರೆ ಏಲಂ ನಲ್ಲಿ ಭಾಗವಹಿಸುತ್ತಿದ್ದಾರೆ.