ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುಮ್ಮನೇ ರೈಲು ಬಿಡಲ್ಲ: ಡೀವಿ

Mainashree
Updated On : 8 Jun 2014, 11:10 am

ಬೆಂಗಳೂರು: 'ಸುಮ್ಮನೇ ರೈಲು ಬಿಡುವುದಿಲ್ಲ, 5 ವರ್ಷದ ನಂತರ ರಿಪೋರ್ಟ್ ಕಾರ್ಡ್ ಕೊಡುತ್ತೇನೆ'
ಪಕ್ಕಾ ಮೋದಿ ಶೈಲಿಯಲ್ಲಿಯೇ ರೇಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರು ರಾಜ್ಯದ ಜನತೆಗೆ ಭರವಸೆ ನೀಡಿದ್ದಾರೆ.
ರೇಲ್ವೆ ಸಚಿವನಾಗಿ ಕೇವಲ ಮಾತಿನಲ್ಲೇ ಕೆಲಸ ಮುಗಿಸುವುದಿಲ್ಲ. ಬದಲಾಗಿ ರೇಲ್ವೆ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ದೊರಕುವ ವ್ಯವಸ್ಥೆ ಮಾಡುತ್ತೇನೆ. ದಿನದ 24 ಗಂಟೆ, ವಾರಪೂರ್ತಿ ಜನರಿಗಾಗಿ ರೈಲು ಓಡುವಂತೆ ಮಾಡಿ ತೋರಿಸುತ್ತೇನೆ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸನ್ಮಾನ ಸ್ವೀಕರಿಸಿ ಸದಾನಂದಗೌಡ ಹೇಳಿದರು.
ಈ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ಕೆಲಸ ಮಾಡಿದಂತೆ ಕೇಂದ್ರ ಸಚಿವನಾಗಿ ಇನ್ನಷ್ಟು ಹುಮ್ಮಸ್ಸಿನಲ್ಲಿ ಕೆಲಸ ಮಾಡುತ್ತೇನೆ. ಬೆಂಗಳೂರು ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸುತ್ತೇನೆ. ಇದರ ಪ್ರಗತಿ ವಿವರದೊಂದಿಗೆ ಮುಂದಿನ ಚುನಾವಣೆಗೆ ನಿಮ್ಮ ಮುಂದೆ ಬರುತ್ತೇನೆ. ನನಗೆ ಮತ ನೀಡಿದ ಮತದಾರರು ಎದೆಯುಬ್ಬಿಸಿ ನಡೆದಾಡುವ ವಾತಾವರಣ ರೂಪಿಸುತ್ತೇನೆ ಎಂದು ಅವರು ಅಭಿಪ್ರಾಯಪಟ್ಟರು.
ಒಬ್ಬ ಸಂಸದ ಹಾಗೂ ಸಚಿವರಾಗಿ ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವುದನ್ನು ಮೋದಿ ಸ್ಪಷ್ಟಪಡಿಸಿದ್ದಾರೆ. ಮೋದಿ ಹಾಗೂ ಭಾರತೀಯರ ಕನಸನ್ನು ನಾವು ಈಡೇರಿಸುತ್ತೇವೆ. ಹಿಂದಿನ 5 ವರ್ಷಗಳಲ್ಲಿ ಏನು ಮಾಡಿದ್ದೇವೆ ಎಂಬ ವರದಿಯನ್ನು ಪ್ರತಿಯೊಬ್ಬ ಮತದಾರರಿಗೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
ಬೆಂಗಳೂರು ಹಾಗೂ  ರಾಜ್ಯದಲ್ಲಿನ ರೇಲ್ವೆ ಯೋಜನೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ತುರ್ತಾಗೆ ಕೆಲ ಯೋಜನೆಗಳಿಗೆ ಚಾಲನೆ ನೀಡಬೇಕಿದೆ. ಇವೆಲ್ಲವನ್ನೂ ಸೇರಿಸಿ ಉತ್ತಮ ಬಜೆಟ್ ಮಂಡಿಸುತ್ತೇನೆ. ಸುಮಾರು13 ಲಕ್ಷ ನೌಕರರು ಹಾಗೂ ಕೋಟ್ಯಂತರ ಜನರನ್ನು ತಲುಪುವ ಇಲಾಖೆಯ ಹೊಣೆ ಹೊತ್ತಿರುವ ಅರಿವು ಇದೆ. ಇದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಸದಾನಂದಗೌಡ ಅಭಿಪ್ರಾಯಪಟ್ಟರು.
ಸನ್ಮಾನ ಸಾಕು, ಕೆಲಸ ಹೇಳಿ: ನಿಮ್ಮ ಮತ ಪಡೆದು ಸಚಿವನಾಗಿದ್ದೇನೆ, ದೊಡ್ಡ ಖುಷಿಯಿದೆ. ಆದರೆ ಇನ್ನು ಹಾರ-ತುರಾಯಿ ಹಾಕುವುದನ್ನು ನಿಲ್ಲಿಸಿ, ನಿಮ್ಮ ಸಮಸ್ಯೆಗಳನ್ನು ಹೇಳಿ, ನಗರದ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಿ. ವಿಶ್ವೇಶ್ವರಯ್ಯ ಟವರ್‌ನಲ್ಲಿರುವ ಸಂಸದ ಕಚೇರಿಯಲ್ಲಿ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಆದರೆ ಫ್ಲೆಕ್ಸ್ ಹಾಕುವುದು, ಸನ್ಮಾನ ಮಾಡುವಂತಹ ಸಂಪ್ರದಾಯದಿಂದ ದೂರವಾಗಿ ಎಂದು ಮತದಾರರಿಗೆ ಡಿವಿಎಸ್ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement