ಅಪೂರ್ಣ ಚತುಷ್ಪಥ; ಮಳೆಗಾಲದಲ್ಲಿ ಸಂಕಷ್ಟ
ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಹೆದ್ದಾರಿ ಚತುಷ್ಪಥ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಈ ಬಾರಿ ಮಳೆಗಾಲದಲ್ಲಿಯೂ ಸಂಕಷ್ಟಗಳ ಸರಮಾಲೆಯ ಮುನ್ಸೂಚನೆ ಸೋಮವಾರದಿಂದಲೇ ದೊರೆತಿದೆ.
ಇಲ್ಲಿನ ಗಣೇಶ್ ಮೆಡಿಕಲ್ಸ್ ಸಮೀಪದ ಅಂಗಡಿಯೊಂದರ ಮುಂಭಾಗದಲ್ಲಿ ಅರ್ಧಕ್ಕೆ ಬಾಯಿ ತೆರೆದುಕೊಂಡಿರುವ ಚರಂಡಿಯಲ್ಲಿ ಬಿರುಸಿನ ಮಳೆ ಬರುವ ವೇಳೆ ಆಳೆತ್ತರಕ್ಕೆ ನೀರು ತುಂಬಿಕೊಳ್ಳುತ್ತಿದ್ದು ಗಂಭೀರ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಚರಂಡಿಯ ಒಳಭಾಗದಲ್ಲಿ ನೀರು ಹರಿದು ಹೋಗುವ ಸಂಪರ್ಕಗಳು ಬಂದ್ ಆಗಿದ್ದು, ನೀರು ಹರಿದು ಹೋಗಲಾರದೆ ಚರಂಡಿ ತುಂಬಿಕೊಂಡು ಬಳಿಕ ಕೊಳಚೆ ಮಿಶ್ರಿತ ಮಳೆ ನೀರು ಹೆದ್ದಾರಿಯಲ್ಲೇ ಮೊಳಕಾಲೆತ್ತರಕ್ಕೆ ಹರಿದು ಹೋಗುತ್ತಿದೆ. ಮಳೆ ಬರುವ ವೇಳೆ ಇಲ್ಲಿನ ಚರಂಡಿ ನೀರಿನಿಂದ ತುಂಬಿಕೊಳ್ಳುವುದರಿಂದ ಅಪಾಯದ ಅರಿವಾಗದೆ ಜನ ಕಾಲು ಹಾಕಿದರೆ ಮುಳುಗಿ ಕೊಚ್ಚಿ ಹೋಗುವ ಅಪಾಯವಿದೆ ಎನ್ನುತ್ತಾರೆ ಸ್ಥಳೀಯರು.
ಇಲ್ಲಿನ ಚರಂಡಿ ಅವ್ಯವಸ್ಥೆ ಬಗ್ಗೆ ನೂರಾರು ಬಾರಿ ಮೌಖಿಕ ಹಾಗೂ ಲಿಖಿತವಾಗಿ ಪುರಸಭಾಧಿಕಾರಿಗಳಿಗೆ ದೂರಿಕೊಂಡಿರೂ ಯಾವುದೇ ಪರಿಣಾಮ ಬೀರಿಲ್ಲ. ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳುವವರೆಗೆ ಪರ್ಯಾಯ ವ್ಯವಸ್ಥೆಯನ್ನಾದರೂ ಕಲ್ಪಿಸಿ ಜನರ ಜೀವಕ್ಕೆ ರಕ್ಷಣೆ ಕೊಡಿ ಎಂದು ಅಧಿಕಾರಿಗಳಲ್ಲಿ ಹಲವು ಬಾರಿ ಕೋರಿಕೊಂಡಿದ್ದೇವೆ ಎಂದು ಇಲ್ಲಿನ ಅಂಗಡಿ ಮಾಲೀಕರು ಹೇಳುತ್ತಾರೆ.