ಕೊಲ್ಲೂರಿಗೆ ಮುಜರಾಯಿ ಅಧಿಕಾರಿಗಳ ಭೇಟಿ
ಕೊಲ್ಲೂರು: ಇಲ್ಲಿನ ಮೂಕಾಂಬಿಕಾ ದೇವಾಲಯ ಮತ್ತು ಶ್ರೀ ನಿತ್ಯಾನಂದ ಆಶ್ರಮದ ನಡುವೆ ನಡೆಯುತ್ತಿರುವ ಶ್ರೀ ವಿಮಲಾನಂದ ಸ್ವಾಮೀಜಿ ಸಮಾಧಿ ವಿವಾದದ ತನಿಖೆಗೆ ಸೋಮವಾರ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಆಗಮ ತಜ್ಞರಾದ ಶಿವಕುಮಾರ್, ವಿಜಯಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಲ್ಲೂರು ದೇವಾಲಯಕ್ಕೆ ಆಗಮಿಸಿದ ಅವರು, ವ್ಯವಸ್ಥಾಪನಾ ಸಮಿತಿ, ಅರ್ಚಕ ವೃಂದ ಮತ್ತು ಅಧಿಕಾರಗಳೊಂದಿಗೆ ಸಭೆ ನಡೆಸಿ, ವಾದ ಆಲಿಸಿದರು. ವಾರದೊಳಗೆ ಇಲಾಖೆ ಆಯುಕ್ತರಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.
ನಿತ್ಯಾನಂದ ಆಶ್ರಮದ ಟ್ರಸ್ಟಿ ಜಯಾನಂದ ಮಾತನಾಡಿ, ಒಂದು ವೇಳೆ ಧಾರ್ಮಿಕ ದತ್ತಿ ಇಲಾಖೆ ಸಮಾಧಿಯನ್ನು ಸ್ಥಳಾಂತರಿಸಲು ಹೇಳಿದರೆ, ನ್ಯಾಯಾಲಯದ ಮೆಟ್ಟಿಲೇರುವುದಾಗಿ ಎಚ್ಚರಿಸಿದರು. ಈ ನಡುವೆ ಸಮಾಧಿ ಸ್ಥಳಾಂತರಿಸುವಂತೆ ಇಲಾಖೆ ಮೇಲೆ ಒತ್ತಡ ಹೇರಲು ಕೊಲ್ಲೂರು ಹಿತರಕ್ಷಣಾ ಸಮಿತಿ ಜೂ. 11ರಂದು ಕೊಲ್ಲೂರು ಬಂದ್ ಗೆ ಕರೆ ನೀಡಿದೆ.