ಕೊಲ್ಲೂರು ವಿವಾದ: ವಾರದೊಳಗೆ ವರದಿ
ಕೊಲ್ಲೂರು: ಇಲ್ಲಿನ ಮುಕಾಂಬಿಕಾ ದೇವಾಲಯ ಮತ್ತು ಶ್ರೀ ನಿತ್ಯಾನಂದ ಆಶ್ರಮದ ನಡುವೆ ನಡೆಯುತ್ತಿರುವ ಶ್ರೀ ವಿಮಲಾನಂದ ಸ್ವಾಮೀಜಿ ಸಮಾಧಿ ವಿವಾದದ ತನಿಖೆಗೆ ಸೋಮವಾರ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಆಗಮ ತಜ್ಞರಾದ ಶಿವಕುಮಾರ್, ವಿಜಯಕುಮಾರ್ ಆಗಮಿಸಿದ್ದು, ವಾರದೊಳಗೆ ಇಲಾಖೆಯ ಆಯುಕ್ತರಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಕಳೆದೊಂದು ವಾರದಿಂದ ನಡೆಯುತ್ತಿರುವ ಸಮಾಧಿ ವಿವಾದ ಇದೀಗ ಇನ್ನಷ್ಟು ಜಟೀಲಗೊಂಡಿದ್ದು, ಪ್ರಕರಣ ಇದೀಗ ಧಾರ್ಮಿಕ ದತ್ತಿ ಇಲಾಖೆಯ ಕೈಯಲ್ಲಿದೆ.
ವಾರದೊಳಗೆ ವರದಿ: ಕೊಲ್ಲೂರು ದೇವಾಲಯಕ್ಕೆ ಆಗಮಿಸಿದ ವಿಜಯಕುಮಾರ್, ಶಿವಕುಮಾರ್ ಮೊದಲು ಅಲ್ಲಿನ ವ್ಯವಸ್ಥಾಪನಾ ಸಮಿತಿ, ಅರ್ಚಕ ವೃಂದ ಮತ್ತು ಅಧಿಕಾರಗಳೊಂದಿಗೆ ಸಭೆ ನಡೆಸಿ, ವಾದವನ್ನು ಆಲಿಸಿದರು.
ಈ ಸಂದರ್ಭದಲ್ಲಿ ಕೊಲ್ಲೂರು ದೇವಳದಲ್ಲಿ ಚಂಡಿಕಾ ಹೋಮ ನಡೆಸಲು ಖಾಸಗಿ ಭೇಟಿ ನೀಡಿದ್ದ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಕೃಷ್ಣಯ್ಯ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ನಂತರ ಶ್ರೀ ನಿತ್ಯಾನಂದಾಶ್ರಮಕ್ಕೂ ಭೇಟಿ ನೀಡಿ, ಸಮಾಧಿ ಸ್ಥಳವನ್ನು ಪರಿಶೀಲಿಸಿ, ಅಲ್ಲಿನ ವಿಶ್ವಸ್ಥರು, ಭಕ್ತರೊಂದಿಗೂ ಸಮಾಲೋಚನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆಗಮಶಾಸ್ತ್ರಜ್ಞರು ವಾರದೊಳಗೆ ಇಲಾಖೆ ಆಯುಕ್ತರಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.
ಕೋರ್ಟ್ ಮೆಟ್ಟಿಲೇರುತ್ತೇವೆ: ಶ್ರೀ ನಿತ್ಯಾನಂದ ಆಶ್ರಮದ ಟ್ರಸ್ಟಿ ಜಯಾನಂದ ಮಾತನಾಡಿ, ನಾವೇನೂ ತಪ್ಪು ಮಾಡಿಲ್ಲ. ಆದ್ದರಿಂದ ಸಮಾಧಿ ಸ್ಥಳಾಂತರ ಮಾಡುವುದಿಲ್ಲ ಎಂದು ಧಾರ್ಮಿಕ ದತ್ತಿ ಇಲಾಖೆಗೆ ಸ್ಪಷ್ಟಪಡಿಸಿದ್ದೇವೆ. ಇಲಾಖೆ ನಮ್ಮ ಪರವಾಗಿ ವರದಿ ನೀಡುತ್ತದೆ ಎಂಬ ಭರವಸೆ ನಮಗಿದೆ.
ಒಂದು ವೇಳೆ ಇಲಾಖೆ ಸಮಾಧಿಯನ್ನು ಸ್ಥಳಾಂತರಿಸಲು ಹೇಳಿದರೆ, ಅನಿವಾರ್ಯವಾಗಿ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಎಚ್ಚರಿಸಿದರು.
11ರಂದು ಬಂದ್: ಈ ನಡುವೆ ಸಮಾಧಿಯನ್ನು ಸ್ಥಳಾಂತರಿಸಬೇಕು ಎಂದು ಇಲಾಖೆಯ ಮೇಲೆ ಒತ್ತಡ ಹೇರುವುದಕ್ಕಾಗಿ ಕೊಲ್ಲೂರು ಹಿತರಕ್ಷಣಾ ಸಮಿತಿಯು 11ರಂದು ಸಂಪೂರ್ಣ ಕೊಲ್ಲೂರು ಬಂದ್ ಘೋಷಿಸಿದೆ.
ಭಾನುವಾರ ಕೊಲ್ಲೂರಿನಲ್ಲಿ ವಿವಿಧ ಸಂಘಟನೆಗಳ ಸಮಾಲೋಚನಾ ಸಭೆ ನಡೆದು, ದೇವಾಲಯಕ್ಕೆ ಬೆಂಬಲ ನೀಡುವುದಕ್ಕೆ ನಿರ್ಧರಿಸಲಾಗಿದೆ. ಸೋಮವಾರ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ದೇವಾಲಯಕ್ಕೆ ಆಗಮಿಸಿ ಬಂದ್ ನಡೆಸುವುದಾಗಿ ದೇವಳದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತ್ತಾಯ ಅವರಿಗೆ ಮನವಿ ಸಲ್ಲಿಸಿತು.
ಏನಾಗಿತ್ತು?
ಜೂ. 2ರಂದು ಇಲ್ಲಿನ ಶ್ರೀ ನಿತ್ಯಾನಂದಾಶ್ರಮದ ಶ್ರೀ ವಿಮಲಾನಂದ ಸ್ವಾಮೀಜಿ ಅವರು ನಿಧನರಾಗಿದ್ದು, ಮರುದಿನ ಆಶ್ರಮದ ಪರಿಸರದಲ್ಲಿಯೇ ಸಮಾಧಿ ನಿರ್ಮಿಸಲಾಗಿದೆ. ಈ ಸಮಾಧಿ ನಿರ್ಮಾಣಕ್ಕೆ ಕೊಲ್ಲೂರು ಮುಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿತ್ತು. ಸಮಾಧಿ ಸ್ಥಳ ಕೊಲ್ಲೂರು ದೇವಳದ ಗಡಿಯೊಳಗಿದ್ದು, ಇದು ದೇವಳದ ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಆದ್ದರಿಂದ ಸಮಾಧಿಯನ್ನು ತೆರವುಗೊಳಿಸಬೇಕು ಎಂದು ಸಮಿತಿ ಆಶ್ರಮದ ಮೇಲೆ ಒತ್ತಡ ಹೇರಿತ್ತು. ಇದಕ್ಕೆ ಆಶ್ರಮ ಒಪ್ಪದೇ ಇರುವುದರಿಂದ, ನಾಡಿನ ಪ್ರಖ್ಯಾತ ಧಾರ್ಮಿಕ ಕೇಂದ್ರವಾಗಿರುವ ಕೊಲ್ಲೂರು ಇದೀಗ ವಿವಾದಕ್ಕೆ ಗುರಿಯಾಗಿದೆ.