ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ತುಳು ದಂಡನಾಯಕರ 'ಚಾಲಿ ಪೋಲಿಲು' ಎಡಿಟಿಂಗ್ ಪೂರ್ಣ

Vishwanath S
Updated On : 10 Jun 2014, 12:20 pm

ಮಂಗಳೂರು: ತುಳು ರಂಗಭೂಮಿಯ ಸೂರ್ಯ ಚಂದ್ರರಂತಿರುವ ವಿಜಯಕುಮಾರ್ ಕೊಡಿಯಾಲ ಬೈಲ್ ಮತ್ತು ದೇವಿದಾಸ್ ಕಾಪಿಕ್ಕಾಡ್ ಜಂಟಿಯಾಗಿ ದುಡಿದಿರುವ ಮೊದಲ ಸಿನಿಮಾ 'ಚಾಲಿ ಪೋಲಿಲು' ಎಡಿಟಿಂಗ್ ಪೂರೈಸಿ ಡಬ್ಬಿಂಗ್ ಹಂತದಲ್ಲಿದೆ. ಸೆಪ್ಟಂಬರ್ ತಿಂಗಳಲ್ಲಿ ತೆರೆಗೆ ಬರಲಿದೆ.
ಮಲೆಯಾಳ ಚಿತ್ರರಂಗದ ಖ್ಯಾತ ಕ್ಯಾಮೆರಾಮ್ಯಾನ್ ಉತ್ಪಲ್ ನಾಯನಾರ್ ಚಳಕದಿಂದ ಮೂಡಿಬಂದಿರುವ ಮೊದಲ ಚುಳು ಚಿತ್ರ. ಪ್ರಮುಖ ಕಲಾವಿದರನ್ನು ಒಂದೇ ವೇದಿಕೆಗೆ ಕರೆತಂದಿರುವುದು ಚಿತ್ರ ನಿರ್ಮಾಪಕ, ಜಯಕಿರಣ ಪತ್ರಿಕೆ ಸಂಪಾದಕ ಪ್ರಕಾಶ್ ಪಾಂಡೇಶ್ವರ ವೈಶಿಷ್ಟ್ಯ. ಚಿತ್ರದ ಸಹ ನಿರ್ಮಾಪಕ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ ಕೂಡಾ ಅಪಾರ ಶ್ರಮ ವಹಿಸಿದ್ದಾರೆ.
ಜಯಕಿರಣ ಫಿಲ್ಮ್ ಲಾಂಛನದಡಿ ಮೊದಲ ಸಿನಿಮಾ ನಿರ್ಮಾಣವಾಗುತ್ತಿದ್ದರೂ ಗುಣಾತ್ಮಕ ಅಂಶಗಳು ಚಿತ್ರಪ್ರೇಮಿಗಳ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಎಲ್ಲ ಪ್ರಮುಖ ಕಲಾವಿದರು ಒಂದೆಡೆ ಕಲೆತಿದ್ದಾರೆ. 400ಕ್ಕೂ ಮಿಕ್ಕಿದ ತಮಿಳು, ತೆಲುಗು, ಮಲೆಯಾಳ, ಕನ್ನಡ ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿದ ಕೂಲ್ ಜಯಂತ್ ಇಲ್ಲಿ ಕಮಾಲ್ ಮಾಡಿದ್ದಾರೆ. ಎರಡು ಕ್ಯಾಮೆರಾ ಬಳಸಿಕೊಂಡು 26 ದಿನಗಳಲ್ಲಿಯೇ ಮಂಗಳೂರು ಸುತ್ತಮುತ್ತ ಚಿತ್ರೀಕರಣ ಪೂರ್ತಿ ಗೊಳಿಸಲಾಗಿದೆ. ಹೊಡೆದಾಟ ದೃಶ್ಯಕ್ಕೆ ಬೆಂಗಳೂರಿನ ಸ್ಟಂಟ್ ತಂಡವೇ ಬೀಡು ಬಿಟ್ಟಿತ್ತು. ಯುವ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಹೊಸತನ ತೋರಿಸುವ ಪ್ರಯತ್ನ ಮಾಡಿದ್ದಾರೆ. ಕಾಪಿಕ್ಕಾಡ್, ಕೊಡಿಯಾಲಬೈಲ್, ವಿ.ಮನೋಹರ್ ಹಾಡು ಬರೆದು, ಹಾಡಿದ್ದು ಆರ್ಕೆಸ್ಟ್ರಾಗಳಲ್ಲಿ ಈಗಲೇ ಮಿಂಚುತ್ತಿವೆ.
ಅರವಿಂದ ಬೋಳಾರ್, ನವೀನ್ ಡಿ.ಪಡೀಲ್, ಭೋಜರಾಜ ವಾಮಂಜೂರು, ಸುಂದರ ರೈ ಮಂದಾರ, ಚೇತನ್ ರೈ ಸ್ಪರ್ಧೆಗೆ ಬಿದ್ದವರಂತೆ ಕಾಣಿಸಿಕೊಂಡಿದ್ದಾರೆ. ಸೀರಿಯಲ್ ನಟಿ ದಿವ್ಯಾ, ನವ್ಯಾ ನಾಯಕಿಯರು. ಕಾಪಿಕ್ಕಾಡ್ ಪುತ್ರ ಅರ್ಜುನ್ ಅತಿಥಿ ನಟರಾಗಿದ್ದಾರೆ. ಸುರೇಂದ್ರ ಬಂಟ್ವಾಳ್, ಪದ್ಮಜಾ ರಾವ್, ಲಕ್ಷ್ಮಣ ಕುಮಾರ್ ಮಲ್ಲೂರು,ಉಮೇಶ್ ಮಿಜಾರ್, ರಾಘವೇಂದ್ರ ರೈ, ಪ್ರಸನ್ನ ಶೆಟ್ಟಿ ಬೈಲೂರು, ಶೋಭಾ ರೈ, ಸರೋಜಿನಿ ಶೆಟ್ಟಿ, ತಿಮ್ಮಪ್ಪ ಕುಲಾಲ್, ಉಮಾನಾಥ ಕೋಟ್ಯಾನ್, ಕರ್ನೂರು ಮೋಹನ್ ರೈ, ಸದಾಶಿವ ದಾಸ್, ಆಗ್ನಲ್, ಮಂಗೇಶ್ ಭಟ್, ದಯಾನಂದ ಕುಲಾಲ್ ಮೊದಲಾದ ದೊಡ್ಡ ತುಳು ತಾರಾಗಣವೇ ಇದೆ.ಚಿತ್ರದಲ್ಲಿ ಬೆಟ್ಟಿಂಗ್ ಮತ್ತು ಜ್ಯೋತಿಷ್ಯ  ಕುರಿತು ವಿಡಂಬನಾತ್ಮಕ ಕಥೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement