ಬಂಟ್ವಾಳ ತಾಪಂ ಅಧ್ಯಕ್ಷ ಯಶವಂತ ಸೇರಾಜೆ, ಉಪಾಧ್ಯಕ್ಷೆ ವಿಲಾಸಿನಿ
ಬಂಟ್ವಾಳ: ಇಲ್ಲಿನ ತಾಲೂಕು ಪಂಚಾಯಿತಿಯ ಮೂರನೇ ಅವಧಿಗೆ ನೂತನ ಅಧ್ಯಕ್ಷರಾಗಿ ಸಜಿಪ ಪಡು ತಾ.ಪಂ. ಕ್ಷೇತ್ರದ ಬಿಜೆಪಿ ಸದಸ್ಯ ಯಶವಂತ ದೇರಾಜೆ ಹಾಗೂ ಉಪಾಧ್ಯಕ್ಷರಾಗಿ ಸರಪಾಡಿ ತಾ.ಪಂ.ಕ್ಷೇತ್ರದ ಸದಸ್ಯೆ ವಿಲಾಸಿನಿ ಆಯ್ಕೆಯಾಗಿದ್ದಾರೆ.
ಬಿ.ಸಿ.ರೋಡಿನ ಎಸ್‌ಜೆಎಸ್‌ಆರ್‌ವೈ ಸಭಾಂಗಣದಲ್ಲಿ ಸೋಮವಾರ ಮಧ್ಯಾಹ್ನ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, ನಿರೀಕ್ಷೆಯಂತೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆ ಬಹುಮತ ಹೊಂದಿರುವ ಬಿಜೆಪಿ ಪಾಲಾಗಿದೆ.
ಅಧ್ಯಕ್ಷ ಸ್ಧಾನವನ್ನು ಹಿಂ.ವ.(ಎ), ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿತ್ತು. 33 ಸದಸ್ಯ ಬಲ ಹೊಂದಿರುವ ತಾ.ಪಂ.ನಲ್ಲಿ 17 ಮಂದಿ ಬಿಜೆಪಿ ಹಾಗೂ 16 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಡಾ.ಪ್ರಶಾಂತ್ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಕೈ ಎತ್ತಿ ಆಯ್ಕೆ: ಅಧ್ಯಕ್ಷ ಸ್ಧಾನಕ್ಕೆ ಬಿಜೆಪಿಯಿಂದ ಯಶವಂತ ದೇರಾಜೆ, ಉಪಾಧ್ಯಕ್ಷ ಸ್ಧಾನಕ್ಕೆ ವಿಲಾಸಿನಿ ನಾಮಪತ್ರ ಸಲ್ಲಿಸಿದ್ದರೆ, ಕ್ರಾಂಗ್ರೆಸ್‌ನಿಂದ ಮಹಮ್ಮದ್ ಶರೀಫ್ ಹಾಗೂ ಶಕುಂತಲಾ ಕುಲಾಲ್ ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ನಡೆದಾಗ ಬಿಜೆಪಿ 17 ಸದಸ್ಯರ ಬಲ ಪಡೆದು ಯಶವಂತ ಅಧ್ಯಕ್ಷರಾಗಿ ವಿಲಾಸಿನಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು. ಕೈ ಎತ್ತುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಯಶವಂತ: ಯಶವಂತ ದೇರಾಜೆ ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಸಜಿಪನಡು ತಾ.ಪಂ.ಕ್ಷೇತ್ರದಿಂದ ಕಳೆದ ಐದು ಬಾರಿ ಸ್ಪರ್ಧಿಸಿದ್ದು, ಈ ಬಾರಿ ಪ್ರಥಮ ಬಾರಿಗೆ ಗೆದ್ದು ತಾ.ಪಂ. ಸದಸ್ಯರಾಗಿದ್ದರು.
ವಿಲಾಸಿನಿ: ವಿಲಾಸಿನಿ ಶಾಂತವೀರ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸರಪಾಡಿ ತಾ.ಪಂ.ಕ್ಷೇತ್ರದಿಂದ ತಾಲೂಕು ಪಂಚಾಯತಿಗೆ ಪ್ರಥಮ ಬಾರಿಗೆ ಆಯ್ಕೆಯಾದವರು. ವಿಲಾಸಿನಿ ಪತಿ ಶಾಂತವೀರ ಪೂಜಾರಿ 1994-95ರಲ್ಲಿ ಬಂಟ್ವಾಳ ತಾಲೂಕು ಪಂಚಾಯತಿಯ ಸದಸ್ಯರಾಗಿದ್ದರು.
ಅಭಿನಂದನೆ: ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಜಿ.ಪಂ.ಅಧಕ್ಷೆ ಆಶಾ ತಿಮ್ಮಪ್ಪ ಗೌಡ, ಉಪಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್, ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿ.ಆನಂದ, ಪಕ್ಷದ ಪ್ರಮುಖರಾದ ತುಂಗಪ್ಪ ಬಂಗೇರ, ದೇವದಾಸ ಶೆಟ್ಟಿ, ರಾಮದಾಸ ಬಂಟ್ವಾಳ್, ಚೆನ್ನಪ್ಪ ಕೋಟ್ಯಾನ್ ಅಭಿನಂದನೆ ಸಲ್ಲಿಸಿದರು.
ನಿರ್ಗಮನ ಅಧ್ಯಕ್ಷೆ ಲಲಿತಾ ಶಿವಪ್ಪ ನಾಯ್ಕ್ ಹಾಗೂ ಉಪಾಧ್ಯಕ್ಷ ಆನಂದ ಎ.ಶಂಭೂರು ಕೃತಜ್ಞತೆ ಸಲ್ಲಿಸಿದರು.