ಶಾಲೆ ಮಕ್ಕಳು ಬೋರ್ಡ್ ಹಿಡಿಯುವ ಕಂಬಗಳು!
ಮಂಗಳೂರು: ಸೆಂಟ್ರಲ್ ಸ್ಕೂಲ್‌ನಲ್ಲಿ ಪ್ರಾಂಶುಪಾಲರ ಸಭೆಗೆ ಬರುವವರಿಗೆ ದಾರಿ ತೋರಿಸಲು ರಸ್ತೆ ಬದಿ, ಗೇಟ್ ಪಕ್ಕ ಬೋರ್ಡ್ ಹಿಡಿದುಕೊಳ್ಳುವ ಕೆಲಸ ಶಾಲೆಯ ಮಕ್ಕಳಿಗೆ!
ಮೇರಿ ಹಿಲ್ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್‌ನಲ್ಲಿ ಮಂಗಳವಾರ ಐಎಸ್‌ಇ, ಸಿಬಿಎಸ್‌ಇ ಶಾಲೆಗಳ ಪ್ರಾಂಶುಪಾಲರ ಸಭೆ ಕರೆಯಲಾಗಿತ್ತು. ನಾನಾ ಕಡೆಯಿಂದ ಪ್ರಾಂಶುಪಾಲರು ಆಗಮಿಸುವ ಹಿನ್ನೆಲೆಯಲ್ಲಿ ಮಾರ್ಗಸೂಚಿ ಫಲಕಗಳನ್ನು ಹಿಡಿದುಕೊಂಡು ಇಬ್ಬರು ವಿದ್ಯಾರ್ಥಿನಿಯರು ರಸ್ತೆ ಮತ್ತು ಮುಖ್ಯ ಗೇಟ್ ಪಕ್ಕದಲ್ಲಿ ಗಂಟೆಗೂ ಹೆಚ್ಚು ಕಾಲ ನಿಂತಿದ್ದರು.
ಸೆಂಟ್ರಲ್ ಸ್ಕೂಲ್ ಶಿಕ್ಷಣ ಶೈಲಿಯೇ ವಿಶಿಷ್ಟ ಎನ್ನಲಾಗುತ್ತಿದೆ, ಆದರೆ ಅಲ್ಲಿ ಮಕ್ಕಳನ್ನು ಕಾವಲುಗಾರರಿಗಿಂತಲೂ ಕಡೆಯಾಗಿ ಬೋರ್ಡ್ ತಗಲಿ ಹಾಕವ ಕಂಬದಂತೆ ಬಳಸಿಕೊಂಡಿರುವುದು ಮಾತ್ರ ವಿಪರ್ಯಾಸ. ವಿದ್ಯಾರ್ಥಿನಿಯರು 'ಎಐಸಿಎಸ್ ಮೀಟಿಂಗ್' ಬರೆದ ಬಾಣ ಗುರುತು ಹಾಕಿದ್ದ ಮಾರ್ಗ ಸೂಚಿ ಫಲಕ ಹಿಡಿದುಕೊಂಡಿದ್ದರು.
ಬಜ್ಪೆ: ಸಿಬಿಐ ಅಧಿಕಾರಿ
ಸೋಗಿನಲ್ಲಿ ಬಂದ ವ್ಯಕ್ತಿಗೆ ಹಲ್ಲೆ
ಮಂಗಳೂರು: ಸಿಬಿಐ ಅಧಿಕಾರಿ ಸೋಗಿನಲ್ಲಿ ಬಜ್ಪೆ ಉದ್ಯಮಿ ಮನೆಗೆ ತೆರಳಿದ್ದ ಮಹಮ್ಮದ್ ಶರೀಫ್ ಎಂಬಾತನಿಗೆ ಸ್ಥಳೀಯರು ಮಂಗಳವಾರ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಮಹಮ್ಮದ್ ಶರೀಫ್ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಶರೀಫ್ ಮತ್ತು ನಾಲ್ಕು ಜನರ ತಂಡ ಬಜ್ಪೆ ಅನ್ಸಾರ್ ಮನೆಗೆ ತೆರಳಿ, 'ನಾವು ಸಿಬಿಐ ಅಧಿಕಾರಿಗಳು, ನೀವು ಉದ್ಯಮದಲ್ಲಿ ಗೋಲ್ ಮಾಲ್ ಮಾಡಿದ್ದೀರಿ, ಈ ಬಗ್ಗೆ ತನಿಖೆಗೆ ಬಂದಿದ್ದೇವೆ. ಹಣ ಕೊಟ್ಟರೆ ಕೇಸ್ ಬಿಡುವುದಾಗಿ' ತಿಳಿಸಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಅನ್ಸಾರ್ ಶರೀಫ್ ತಂಡಕ್ಕೆ ಹೇಳಿದಾಗ ಪೊಲೀಸರೇ ನಮ್ಮನ್ನು ಕಳುಹಿಸಿರುವುದಾಗಿ ಹೇಳಿದ್ದರು. ನಂತರ ಮಾತುಕತೆ ನಡೆಸಿ ರು. 25,000 ಮಂಗಳವಾರ ಕೊಡುವುದಾಗಿ ಅವರನ್ನು ಅನ್ಸಾರ್ ಸಾಗಹಾಕಿದ್ದರು. ಮಂಗಳವಾರ ಹಣ ಕೇಳಲು ಬಂದ ಶರೀಫ್ ಸಹಿತ ನಾಲ್ವರಿಗೆ ಸ್ಥಳೀಯರು ಹಲ್ಲೆ ನಡೆಸಿದ್ದು, ಮೂರು ಮಂದಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಜ್ಪೆ ಠಾಣೆಯಲ್ಲಿ ಶರೀಫ್ ವಿರುದ್ಧ ಪ್ರಕರಣದಾಖಲಾಗಿದೆ.
ಭಜನೆ ಮೂಲಕ ಆತ್ಮಸ್ಥೈರ್ಯ: ಜೈನ್
ಮೂಲ್ಕಿ: ಧಾರ್ಮಿಕ ಕ್ಷೇತ್ರಗಳ ಪುನಶ್ಚೇತನದಿಂದ ಜನರಲ್ಲಿ ಧಾರ್ಮಿಕ ಭಾವನೆ ಮೂಡಲು ಸಾಧ್ಯ ಎಂದು ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು. ಗೋಳಿಜೋರ ರಾಮನಗರದ ಹರಿಹರ ಶ್ರೀ ರಾಮಭಜನಾ ಮಂದಿರದಲ್ಲಿ ಮಂದಿರದ ನವೀಕೃತ ಆಲಯ ಸಮರ್ಪಣೆ ಹಾಗೂ ಶ್ರೀ ಕೋಡಂದರಾಮ ದೇವರ ಬಿಂಬ ಪುನ ಪ್ರತಿಷ್ಠೆ ಸಂದರ್ಭದಲ್ಲಿ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ ಆಶೀರ್ವಚನ ಮಾಡಿದರು. ಜಿಪಂ ಸದಸ್ಯೆ ಆಶಾ ಸುವರ್ಣ, ತಾ.ಪಂ. ಸದಸ್ಯ ರಾಜು ಕುಂದರ್, ಕಿನ್ನಿಗೋಳಿ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಹೆಗ್ಡೆ, ಸದಸ್ಯರಾದ ಫಿಲೋಮಿನಾ ಸಿಕ್ವೇರಾ, ಯಜ್ಞತಾ ಆಚಾರ್ಯ, ಸಮಿತಿ ಅಧ್ಯಕ್ಷ ಶಂಕರ್ ಮತ್ತಿತರರು ಇದ್ದರು.
ಆದಾಯ ತೆರಿಗೆ
ಆಯುಕ್ತ ಮೂರ್ತಿ
ಮಂಗಳೂರು: ಎನ್‌ಎಂಪಿಟಿ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದ ಟಿ.ಎಸ್.ಎನ್.ಮೂರ್ತಿ ಅವರು ಮಾತೃ ಇಲಾಖೆ ಅದಾಯ ತೆರಿಗೆ ಇಲಾಖೆಗೆ ಆಯುಕ್ತರಾಗಿ ವರ್ಗವಾಗಿದ್ದಾರೆ. ಎನ್‌ಎಂಪಿಟಿ ಇವರ ಆಡಳಿತ ಅವಧಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಗಿಡ ನೆಡುವ ಮೂಲಕ ಹಸಿರು ಮತ್ತು ಸ್ವಚ್ಛತೆಗೆ ಗ್ರೀನ್ ಟೆಕ್ ಪ್ರಶಸ್ತಿ ಕೂಡಾ ಲಭಿಸಿತ್ತು.
ಅಣೆಕಟ್ಟು ನೀರು ಬಿಡುವಾಗ ಗಂಟೆ
ಉಪ್ಪಿನಂಗಡಿ: ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ನೀರಕಟ್ಟೆ ಸಾಗರ್ ಪವರ್ ಪ್ರಾಜೆಕ್ಟ್‌ನಲ್ಲಿ ಜಲವಿದ್ಯುತ್ ಉತ್ಪಾದನೆ ಆರಂಭಗೊಳ್ಳುತ್ತದೆ. ವಿದ್ಯುತ್ ಸ್ಥಾವರಕ್ಕೆ 240 ಕ್ಯೂಸೆಕ್ಸ್ ನೀರನ್ನು ಮಾತ್ರ ಉಪಯೋಗಿಸುತ್ತಿದ್ದು, ಹೆಚ್ಚುವರಿ ನೀರನ್ನು ದಿನದ 24 ಗಂಟೆಯೂ ಕ್ರೆಸ್ಟ್ ಗೇಟ್ ಮೂಲಕ ಹೊರ ಬಿಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ವಿದ್ಯುತ್ ಸ್ಥಾವರದ ಮೇಲ್ದಂಡೆಯಲ್ಲಿ ಇತರ 3 ಪವರ್ ಪ್ರಾಜೆಕ್ಟ್ ಕಾರ್ಯಾಚರಿಸುತ್ತಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಮೇಲಿನಿಂದ ಬರುವ ಮಳೆ ನೀರಿನ ಪ್ರಮಾಣ ಮತ್ತು ನೀರಿನ ಹರಿವಿನ ಬಗ್ಗೆ ಮುಂಚಿತವಾಗಿ ಮಾಹಿತಿ ಪಡೆದು ಅಪಾಯದ ಸೂಚನೆ ದೊರಕಿದಾಗಲೆಲ್ಲ ಕಂದಾಯ, ಪೊಲೀಸ್, ನದಿ ತೀರದಲ್ಲಿರುವ ಗ್ರಾಮ ಪಂಚಾಯಿತಿಗಳಿಗೆ ಮಾಹಿತಿ ನೀಡಲಾಗುವುದು ಮತ್ತು ನದಿ ಪಾತ್ರದಲ್ಲಿ ಇರುವ ಗ್ರಾಮಸ್ಥರಿಗೆ ಗೊತ್ತುಪಡಿಸುವ ಸಲುವಾಗಿ ಸೈರನ್ ಮೊಳಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಏರಿದ ತುಟ್ಟಿಭತ್ಯೆ ನೀಡಲು ಪ್ರತಿಭಟನೆ
ಮಂಗಳೂರು: ಬೀಡಿ ಕಾರ್ಮಿಕರಿಗೆ ಏರಿಕೆಯಾದ ತುಟ್ಟಿಭತ್ಯೆಯನ್ನು 2014 ಏಪ್ರೀಲ್‌ನಿಂದ ನೀಡದಿರುವ ಬೀಡಿ ಮಾಲೀಕರ ನೀತಿ ವಿರೋಧಿಸಿ ಇತ್ತೀಚೆಗೆ ಸಿಐಟಿಯು ನೇತೃತ್ವದಲ್ಲಿ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಎದುರು ಬೀಡಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಸಿಐಟಿಯು ಮುಖಂಡ ಬಿ.ಎಂ.ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ತಕ್ಷಣವೇ ತುಟ್ಟಿಭತ್ಯೆ ನೀಡುವಂತೆ ಆಗ್ರಹಿಸಿದರು. ಇಲಾಖೆ ಪರವಾಗಿ ಹಿರಿಯ ಕಾರ್ಮಿಕ ಇನ್ಸ್‌ಪೆಕ್ಟರ್ ಕುಮಾರ್ ಮನವಿ ಸ್ವೀಕರಿಸಿದರು ಮುಂದಾಳುಗಳಾದ ಯು.ಬಿ.ಲೋಕಯ್ಯ ಮತ್ತಿತರರು ಇದ್ದರು.
ಟೆಂಪೊ-ಬಸ್ ಡಿಕ್ಕಿ: ಇಬ್ಬರಿಗೆ ಗಾಯ, ಚಾಲಕಗೆ ಹಲ್ಲೆ
ಬೆಳ್ತಂಗಡಿ: ಗುರುವಾಯನಕೆರೆ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಜಾರಿಗೆಬೈಲು ಎಂಬಲ್ಲಿ ಗೂಡ್ಸ್ ಟೆಂಪೊ ಮತ್ತು ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದು ಇಬ್ಬರು ಗಾಯಗೊಂಡಿದ್ದಾರೆ. ಬಸ್ ಚಾಲಕನ ಮೇಲೂ ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಆಪೆ ಗೂಡ್ಸ್ ಟೆಂಪೊ ಚಾಲಕ ಕುವೆಟ್ಟು ಸುಧೇಕಾರು ನಿವಾಸಿ ಮಹಮ್ಮದ್ ರಮೀಜ್ (22) ಹಾಗೂ ಬಂಟ್ವಾಳ ತಾಲೂಕಿನ ಕೆದಿಲ ನಿವಾಸಿ ತುಫೈಲ್ ಗಾಯಗೊಂಡವರು. ್ಗಯಗೊಂಡವರು. ತೆಕ್ಕಾರು ಹೊಸಮೊಗ್ರು ನಿವಾಸಿ ಅಬ್ದುಲ್ ನಿಸಾರ್ (30) ಹಲ್ಲೆಗೊಳಗಾದ ಬಸ್ಸಿನ ಚಾಲಕ.
ಗೋವಿಂದೂರು ಎಂಬಲ್ಲಿಂದ ಬರುತ್ತಿದ್ದ ಗೂಡ್ಸ್ ಟೆಂಪೋ ಹಾಗೂ ಗುರುವಾಯನಕೆರೆಯಿಂದ ಉಪ್ಪಿನಂಗಡಿಗೆ ಹೋಗುತ್ತಿದ್ದ ಬಸ್ ಜಾರಿಗೆಬೈಲು ಸಮೀಪದ ಗೋವಿಂದೂರು ತಿರುವಿನಲ್ಲಿ ಡಿಕ್ಕಿ ಹೊಡೆದಿದೆ.
ಗುದ್ದಿದ ರಭಸಕ್ಕೆ ಟೆಂಪೋ ಮಗುಚಿ ಬಿದ್ದು ಅದರಲ್ಲಿದ್ದ ಇಬ್ಬರು ಗಾಯಗೊಂಡಿದ್ದು ಗುರುವಾಯನಕೆರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಪಘಾತ ನಡೆದ ಸಂದರ್ಭ ಬಸ್ ಚಾಲಕ ನಿಸಾರ್ ಮೇಲೆ ಹಲ್ಲೆ ಮಾಡಿದ ಘಟನೆಯೂ ನಡೆದಿದೆ.
ಅಪಘಾತ ಸಂಭವಿಸಿದ ನಂತರ ಹೈದರ್, ಆಪೆ ರಿಕ್ಷಾ ಚಾಲಕ ಹೈದರ್ ಹಾಗೂ ಇನ್ನಿಬ್ಬರು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಗಾಯಗೊಂಡ ನಿಸಾರ್ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಎರಡು ಪ್ರಕರಣಗಳು ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿವೆ.
ಜೀವನದಲ್ಲಿ ಜಿಗುಪ್ಸೆ; ವೃದ್ಧ ಆತ್ಮಹತ್ಯೆ
ಬ್ರಹ್ಮಾವರ: ಇಲ್ಲಿನ ಆರೂರು ಗ್ರಾಮದ ಕೀರ್ತಿನಗರ ಎಂಬಲ್ಲಿ ವೃದ್ಧರೊಬ್ಬರು ಆತ್ಮಹತ್ಯೆ ಮಾಡಿದ ಘಟನೆ ಮಂಗಳವಾರ ನಡೆದಿದೆ.
ಮೃತರು ಬಾಬುರಾಯ ಆಚಾರ್ಯ (67), ತಮ್ಮ ಮತ್ತು ಪತ್ನಿಯ ಅನಾರೋಗ್ಯದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮಂಗಳವಾರ ಮಂಜಾವಗೆ 4 ಗಂಟೆಯಿಂದ 4.30 ಗಂಟೆಯ ಮಧ್ಯದ ಅವಧಿಯಲ್ಲಿ ಮನೆಯ ಬಳಿಯ ಗೇರು ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮೃತರ ಪುತ್ರ ಹರೀಶ್ಚಂದ್ರ ಆಚಾರ್ಯ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.