ಕುಳ್ಳ, ಕುಂಟ, ಕಿರಿಯ, ಅಂಗವಿಕಲರ ಕ್ರೀಡೆಗೆ ಅನುದಾನವಿಲ್ಲ: ಅಭಯಚಂದ್ರ
ಮಂಗಳೂರು: 'ಕುಳ್ಳರ, ಕುಂಟರ, ಕಿರಿಯರ, ಅಂಗವಿಕಲರ ಕ್ರೀಡೆಗಳಿಗೆ ಅನುದಾನ ಕೊಡುವುದಕ್ಕೆ ಆಗುವುದಿಲ್ಲ. ಮಾನ್ಯತೆ ಪಡೆದ ಕ್ರೀಡೆಗಳಿಗೆ ಮಾತ್ರ ಅನುದಾನ ನೀಡಲಾಗುವುದು'.
ಇದು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಅಭಯಚಂದ್ರ ಜೈನ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕ್ರೀಡಾ ಸಂಘಟನೆಗಳ ಪದಾಧಿಕಾರಿಗಳಿಗೆ ಹೇಳಿದ ಚುಚ್ಚು ಮಾತು.
ಈಗ ಹೊಸ ಹೊಸ ಕ್ರೀಡೆಗಳು ಹುಟ್ಟಿಕೊಂಡಿದೆ. ಎಲ್ಲದಕ್ಕೂ ಅನುದಾನ ಕೇಳ್ತಾರೆ. ಅಮೆರಿಕಾಗೆ ಹೋಗುತ್ತೇವೆ, ನೆರವು ಕೊಡಿ ಎನ್ನುತ್ತಾರೆ. ಎಲ್ಲರಿಗೂ ಕೊಡುವುದಕ್ಕಾಗಲ್ಲ, ಕೊಡದಿದ್ದರೆ ಟೀಕೆ ಎದುರಿಸಬೇಕಾಗುತ್ತದೆ. ಈಗ ನನ್ನ ಇಲಾಖೆ ಬಜೆಟ್ ರು. 33 ಕೋಟಿ ಇದ್ದುದು ರು. 11 ಕೋಟಿಗೆ ಇಳಿದಿದೆ. ಅದನ್ನು ಸಮರ್ಪಕವಾಗಿ ಹಂಚಿಕೆ ಮಾಡಬೇಕು ಎಂದು ಅಸಹಾಯಕತೆ ಮುಂದಿಟ್ಟರು.
ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ವಿವಿಧ ಕ್ರೀಡೆಗಳಿಗೆ ಕೊಡಬೇಕಾದ ಅನುದಾನದ ಬಗ್ಗೆ ಪಟ್ಟಿ ಮಾಡಿದರೆ ಈ ತೊಂದರೆ ತಪ್ಪಿಸಬಹುದು ಎಂದರಲ್ಲದೆ, ಇದಕ್ಕೆ ಎರಡು ಮೂರು ಮಠಗಳಿಗೆ ನೀಡುವ ದುಡ್ಡೂ ಬೇಕಾಗಿಲ್ಲ ಎಂದು ಸಮಜಾಯಿಷಿಗೆ ಮುಂದಾದರು. ಕೂಡಲೇ ಸಿಟ್ಟಿಗೆದ್ದ ಸಚಿವರು, ಈಗ ಸರ್ಕಾರ ಮಠಗಳಿಗೆ ದುಡ್ಡು ಕೊಡೋದಿಲ್ಲ, ಇದು ಸ್ಪಷ್ಟ. ಒಂದು ವೇಳೆ ಕೊಟ್ಟಿದ್ದರೆ ಬೆರಳೆಣಿಕೆ ಮಠಗಳಿಗೆ ಇರಬಹುದು ಎಂದು ಹೇಳಿದರು.
ರಾಜ್ಯದಲ್ಲಿ 90 ಮಂದಿ ಕ್ರೀಡಾ ಕೋಚ್‌ಗಳಿದ್ದರೂ ಅವರಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಅವರಿಗೀಗ ಶೇ.20 ಗೌರವಧನ ಹೆಚ್ಚಿಸಲಾಗಿದೆ. ನಾನಾ ಕಾರಣಗಳಿಗೆ ಅವರ ಸೇವೆ ಸಮರ್ಪಕ ಬಳಸಿಕೊಳ್ಳಲು ತೊಂದರೆಯಾಗಿದೆ. ಅವರನ್ನು ಶೀಘ್ರ ಕಾಯಂಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.