ಬ್ಯಾಂಕ್ ನಗದು ಸಾಗಾಟ ವಾಹನಕ್ಕೆ ಲಾರಿ ಡಿಕ್ಕಿ: ಚಾಲಕ, ಭದ್ರತೆ ಸಿಬ್ಬಂದಿ ಗಾಯ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ನೀರಕಟ್ಟೆ ಎಂಬಲ್ಲಿ ಮರಳು ಸಾಗಾಟದ ಲಾರಿ ಬ್ಯಾಂಕ್ಗೆ ಭಾರಿ ಮೊತ್ತದ ಹಣ ಸಾಗಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದು, ಬಳಿಕ ರಕ್ಷಣಾ ತಂಡದ ಕಾರಿಗೆ ಡಿಕ್ಕಿ ಹೊಡೆದು ಗೊಂದಲ ಸೃಷ್ಟಿಸಿದ ಘಟನೆ ಗುರುವಾರ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಬ್ಯಾಂಕೊಂದಕ್ಕೆ ಸೇರಿದ ಭಾರಿ ಮೊತ್ತದ ಹಣವನ್ನು ಮಂಗಳೂರಿನಿಂದ ಬೆಂಗಳೂರಿಗೆ ಕಂಟೈನರ್ ಲಾರಿಯಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಈ ಹಣ ಸಾಗಾಟಕ್ಕೆ ಸೂಕ್ತ ಬೆಂಗಾವಲು ಪಡೆಯೊಂದಿಗೆ ಎರಡು ವಾಹನಗಳಲ್ಲಿ ರಕ್ಷಣಾ ಕಣ್ಗಾವಲು ಒದಗಿಸಲಾಗಿತ್ತು.
ಅಂತೆಯೇ ಕಂಟೇನರ್ ಲಾರಿ ಮತ್ತು ಅದರ ಕಣ್ಗಾವಲು ಪಡೆಯ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಕಾರು ನೀರಕಟ್ಟೆ ಸಮೀಪಿಸುತ್ತಿದ್ದಂತೆಯೇ ಎದುರಿನಿಂದ ಬಂದ ಮರಳು ಸಾಗಾಟದ ಲಾರಿ ಕಂಟೇನರ್ಗೆ ಡಿಕ್ಕಿ ಹೊಡೆದು ಬಳಿಕ ಕಂಟೇನರ್ ಹಿಂದಿನಿಂದ ಬರುತ್ತಿದ್ದ ರಕ್ಷಣಾ ಕಣ್ಗಾವಲು ಪಡೆಯು ಬರುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆಯಿತು.
ಪರಿಣಾಮ ಕಂಟೇನರ್ಲ್ಲಿದ್ದ ಚಾಲಕ ಶೈಲೇಶ್ ಮತ್ತು ಭದ್ರತಾ ಪೊಲೀಸ್ ಸಿಬ್ಬಂದಿ ಶೇಖರ್ ಕುಲಾಲ್ ಗಾಯಗೊಂಡು ವಿವಿಧ ಆಸ್ಪತ್ರೆಗೆ ದಾಖಲುಗೊಂಡರು.
ಇನ್ನೋವಾ ಕಾರಿನಲ್ಲಿದ್ದ ಭದ್ರತಾ ಕಾರ್ಯದ ಚಂದ್ರಶೇಖರ್ ಪಾಟಾಳಿ, ವೇಣುಗೋಪಾಲ, ರವಿರಾಜ್, ಶ್ರೀ ಶೈಲ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಕಂಟೇನರ್ ಲಾರಿ ಚಾಲಕ ಶೈಲೇಶ್ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭೀತಿ ಮೂಡಿಸಿದ ಅಪಘಾತ: ಈ ಅಪಘಾತ ಹಣ ಲಪಟಾಯಿಸಲು ಉದ್ದೇಶಪೂರ್ವಕವಾಗಿ ನಡೆದಿರಬಹುದೇ ಎಂಬ ಸಂದೇಹ ಮೂಡಿ, ಭೀತಿ ಕಾಡಿತ್ತಾದರೂ, ಕೈಗೊಂಡ ತ್ವರಿತ ಕಾರ್ಯಾಚರಣೆಯಲ್ಲಿ ಇದೊಂದು ಆಕಸ್ಮಿಕ ಅವಘಡ ಎಂದು ತಿಳಿಯಲಾಯಿತು.
ನಿರ್ಲಕ್ಷ್ಯದ ಚಾಲನೆಯ ಆರೋಪದಲ್ಲಿ ಮರಳು ಸಾಗಟದ ಲಾರಿಯ ಚಾಲಕ ನಾಗರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಸಂಚಾರಿ ಠಾಣಾ ಪೊಲೀಸರು, ಉಪ್ಪಿನಂಗಡಿ ಠಾಣಾ ಪೊಲೀಸರು ಭೇಟಿ ನೀಡಿ ಸೂಕ್ತ ಭದ್ರತೆ ಕೈಗೊಂಡರು.