ಪುಂಜಾಲಕಟ್ಟೆ ರಸ್ತೆ ಕೆಸರುಗದ್ದೆ!
ಬಂಟ್ವಾಳ: ಇದೇನು ಕೆಸರು ಗದ್ದೆಯೋ, ರಸ್ತೆಯೋ ಗೊತ್ತಾಗುತ್ತಿಲ್ಲ... ಪುಂಜಾಲಕಟ್ಟೆ ಪೇಟೆಯಿಂದ ಬೆರ್ಕಳವನ್ನು ಸಂಪರ್ಕಿಸುವ ರಸ್ತೆ ಕೆಸರುಮಯವಾಗಿ ಕಾಲಿಡಲೂ ಅಸಾಧ್ಯವಾದ ಪರಿಸ್ಥಿತಿ ಉಂಟಾಗಿದೆ.
ಸಂಪೂರ್ಣ ಹದಗೆಟ್ಟ ರಸ್ತೆಯಲ್ಲಿ ಸಂಚಾರ ಕಷ್ಟವಾಗಿ ಸಾರ್ವಜನಿಕರು ಪರದಾಡುತ್ತಿದ್ದಾರೆ. ಮಣ್ಣು ತುಂಬಿದ್ದರಿಂದ ಕೆಸರುಮಯವಾಗಿ ಜನ ಹಾಗೂ ವಾಹನ ಸಂಚಾರಕ್ಕೆ ಅಯೋಗ್ಯವಾಗಿದ್ದು, ಊರುಗಳ ಸಂಪರ್ಕ ಶೋಚನೀಯವಾಗಿದೆ. ಕಳೆದ ಹಲವು ವರ್ಷಗಳಿಂದ ದುರಸ್ತಿ ಕಾಣದ ಈ ರಸ್ತೆ ಸಾರ್ವಜನಿಕರ ಪ್ರತಿಭಟನೆಯಿಂದ ಮಳೆಗಾಲದ ಮುಂಚೆ ದುರಸ್ತಿ ಕಾರ್ಯ ಆರಂಭಿಸಲಾಗಿದೆ. ಅಸಮರ್ಪಕ ಯೋಜನೆಯಿಂದ ಇದ್ದ ರಸ್ತೆಯೂ ಹಾಳಾಗಿದೆ.
ಜಿಲ್ಲಾ ಪಂಚಾಯಿತಿಗೆ ಸಂಬಂಧಿಸಿದ ಈ ರಸ್ತೆ ಕೆಲವೆಡೆ ಬಂಟ್ವಾಳ ತಾಲೂಕಿಗೆ ಹಾಗೂ ಕೆಲವೆಡೆ ಬೆಳ್ತಂಗಡಿ ತಾಲೂಕಿಗೆ ಸೇರಿದೆ. ಬೆಳ್ತಂಗಡಿ ತಾಲೂಕಿನ ಅಳದಂಗಡಿ ಜಿ.ಪಂ. ಕ್ಷೇತ್ರ ಹಾಗೂ ಬಂಟ್ವಾಳ ತಾಲೂಕಿನ ಸರಪಾಡಿ ಜಿ.ಪಂ. ಕ್ಷೇತ್ರಗಳನ್ನು ಒಳಗೊಂಡಿದೆ. ಈ ರಸ್ತೆ ಬೆರ್ಕಳ, ನರಸಿಕುಮೇರು, ಮಾಡಪಲ್ಕೆಯಿಂದ ಪಾಂಡವರಕಲ್ಲಿಗೆ ಹಾಗೂ ಮಾಡಪಲ್ಕೆಯಿಂದ ಕಟ್ಟದಪಡ್ಪು, ಕಕ್ಯಪದವು ಮಾರ್ಗವಾಗಿ ನೇರ ಉಪ್ಪಿನಂಗಡಿಯನ್ನು ಸಂಪರ್ಕಿಸುತ್ತದೆ.
ಈ ರಸ್ತೆ ಕೆಸರುಮಯವಾಗಿರುವುದರಿಂದ ಬಹಳ ಸುತ್ತು ಬಳಸಿ, ದುಬಾರಿ ಹಣ ತೆತ್ತು, ಗಂಟೆಗಟ್ಟವೆ ವ್ಯಯಿಸುತ್ತಾ ಪಾಂಡವರಕಲ್ಲು - ಮಡಂತ್ಯಾರು ಮಾರ್ಗವಾಗಿ ಜನ ಪ್ರಯಾಣಿಸುತ್ತಿದ್ದಾರೆ. ಅನಾರೋಗ್ಯದಿಂದ ಬಳಲುವವರಿಗಂತೂ ದೇವರೇ ಗತಿ. ಹಾಲು ಸರಬರಾಜು ಕೇಂದ್ರಕ್ಕೆ ಹಾಲು ಕೊಂಡೊಯ್ಯುವ ಅಟೋ ರಿಕ್ಷಾದ ಸಂಕಷ್ಟ ಹೇಳತೀರದು.
ಇಲ್ಲಿನ ಪರಿಸರದಲ್ಲಿ ಕಾರ್ಯಾಚರಿಸುತ್ತಿರುವ ಕಲ್ಲಿನ ಕ್ವಾರಿಗಳ ಘನಗಾತ್ರದ ಟಿಪ್ಪರ್ಗಳಿಂದಾಗಿ ರಸ್ತೆ ಹೊಂಡ ಉಂಟಾಗಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜನರ ಪ್ರತಿಭಟನೆಗೆ ಸ್ಪಂದಿಸಿದ ಬೆಳ್ತಂಗಡಿ ಹಾಗೂ ಬಂಟ್ವಾಳ ಶಾಸಕರು ರಸ್ತೆ ಅಭಿವೃದ್ಧಿಯ ಭರವಸೆ ನೀಡಿದ್ದರು. ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ರು. 30 ಲಕ್ಷ ಅನುದಾನ ಒದಗಿಸಿಕೊಡುವ ಭರವಸೆ ನೀಡಿ ಗುತ್ತಿಗೆದಾರರಲ್ಲಿ ಕಾಮಗಾರಿ ಆರಂಭಿಸುವಂತೆ ಸೂಚಿಸಿದ್ದರು. ಆ ಪ್ರಕಾರ ಬಳಿಕ ಲೋಕಸಭಾ ಚುನಾವಣೆ ಸಂದರ್ಭ ಅವಸರದಲ್ಲಿ ಇದ್ದ ಡಾಂಬರು ತೆಗೆದು ದುರಸ್ತಿ ಕಾರ್ಯ ಪ್ರಾರಂಭಗೊಂಡಿತ್ತು. ನಂತರ ಚುನಾವಣಾ ನೀತಿ ಸಂಹಿತೆ ಪ್ರಯುಕ್ತ ಕಾಮಗಾರಿ ಸ್ಥಗಿತಗೊಂಡಿತ್ತು.
ಕಾಮಗಾರಿ ಆರಂಭಿಸಿದ ಗುತ್ತಿಗೆದಾರ ಇದೀಗ ಅರ್ಧದಲ್ಲಿ ನಿಲ್ಲಿಸಿದ್ದರಿಂದ ಈ ಸ್ಥಿತಿ ಎದುರಾಗಿದೆ ಎಂದು ಆರೋಪಿಸಲಾಗಿದ್ದು, ರಸ್ತೆ ದುರವಸ್ಥೆಯಿಂದ ಅಕ್ರೋಶಿತ ಸ್ಥಳೀಯ ಆಟೋ ಚಾಲಕ-ಮಾಲೀಕರ ಸಂಘದ ಸದಸ್ಯರು, ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಲು ಸಿದ್ಧರಾಗಿದ್ದಾರೆ.