ಮಂಗಳೂರು: ಮಳೆ ಬಿರುಸು
ಮಂಗಳೂರು: ನಗರದಲ್ಲಿ ಮಂಗಳವಾರ ಧಾರಾಕಾರ ಮಳೆ ಸುರಿದಿದೆ. ಬೆಳಗ್ಗಿನಿಂದಲೇ ಪ್ರಾರಂಭಗೊಂಡ ಮಳೆ ಮಧ್ಯಾಹ್ನ ವೇಳೆ ಬಿಡುವು ಪಡೆದಿತ್ತು. ಸಂಜೆ ವೇಳೆ ಮತ್ತೆ ಬಿರುಸಾದ ಮಳೆ ಸುರಿದಿದೆ.
ಮುಂಜಾನೆ ಸುರಿದ ಮಳೆಗೆ ಅರ್ಕುಳ ಬಳಿ ರಸ್ತೆಗೆ ಬೃಹತ್ ಮರ ಉರುಳಿ ಬಿದ್ದಿತ್ತು. ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಅಗ್ನಿಶಾಮಕ ತಂಡ ಮರವನ್ನು ತೆರವುಗೊಳಿಸಿದೆ.
ಸೋಮವಾರ ತಡ ರಾತ್ರಿ ಕಾವೂರು ಮೆಸ್ಕಾಂ ವ್ಯಾಪ್ತಿಯಲ್ಲಿ ರಸ್ತೆಗೆ ಮರವೊಂದು ಉರುಳಿ ಬಿದ್ದಿತ್ತು. ಕದ್ರಿ ಅಗ್ನಿ ಶಾಮಕ ತಂಡ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿತು.
ಕೊಟ್ಟಾರ ಚೌಕಿ ಸರ್ವಿಸ್ ರಸ್ತೆಯಲ್ಲಿ ಮತ್ತದೇ ಅವ್ಯವಸ್ಥೆ ಮುಂದುವರಿದಿದೆ. ದೊಡ್ಡ ಹೊಂಡಗಳಲ್ಲಿ ನೀರು ತುಂಬಿದ್ದು, ವಾಹನ ಸವಾರರು ಪರದಾಡುವಂತಾಯಿತು.
ರಸ್ತೆಯ ಮೂರು ಕಡೆಯಲ್ಲಿ ದೊಡ್ಡ ಗುಂಡಿಗಳಾಗಿದ್ದು, ಕಾಮಗಾರಿಗೆಂದು ರಸ್ತೆ ಬದಿ ಫುಟ್ಪಾತ್ ಸಿಮೆಂಟ್ ತುಂಡುಗಳನ್ನು ತೆರೆದಿಟ್ಟಿದ್ದು, ನೀರು ತುಂಬಿ ಪಾದಚಾರಿಗಳು ನಡೆಯಲು ಸ್ಥಳವಿಲ್ಲದಾಗಿದೆ. ದ್ವಿಚಕ್ರ, ಕಾರು ಸವಾರರಂತೂ ರಸ್ತೆಯಲ್ಲಿನ ಗುಂಡಿಗಳ ಅರಿವಿಲ್ಲದೆ ಪರದಾಡಿದರು.
ಉಳ್ಳಾಲದಲ್ಲಿ ಕಡಲ್ಕೊರೆತ ಯಥಾಸ್ಥಿತಿ ಮುಂದುವರಿದಿದೆ. ಕೈಕೊ, ಹಿಲರಿ ನಗರ, ಉಚ್ಚಿಲ, ಸಮ್ಮರ್ ಸ್ಯಾಂಡ್ ಹಾಗೂ ಮೊಗವೀರ ಪಟ್ಣದಲ್ಲಿ ಸಮುದ್ರಕ್ಕೆ ಬಂದರು ಇಲಾಖೆಯಿಂದ ಕಲ್ಲು ಹಾಕುವ ಕಾಮಗಾರಿ ಮುಂದುವರಿದಿದೆ.
ಕಳೆದ 24 ಗಂಟೆಯಲ್ಲಿ ಜಿಲ್ಲೆಯ ಮೂಡುಬಿದಿರೆಯಲ್ಲಿ 176.6 ಮಿ.ಮೀ. ಗರಿಷ್ಠ ಮಳೆಯಾಗಿದೆ.
ಮಳೆ ವರದಿ
ಮಂಗಳೂರು- 107 ಮಿ.ಮೀ., ಕಡಬ- 61.3 ಮಿ.ಮೀ., ಪುತ್ತೂರು- 57.3 ಮಿ.ಮೀ., ಸುಳ್ಯ- 46 ಮಿ.ಮೀ., ಬೆಳ್ತಂಗಡಿ- 20.6 ಮಿ.ಮೀ., ಬಂಟ್ವಾಳ- 25.4 ಮಿ.ಮೀ. ಮಳೆ ದಾಖಲಾಗಿದೆ.