ವಿದ್ಯುತ್ ಶಾಕ್: ಯುವಕ ಸಾವು
ಮಂಗಳೂರು: ಪಾಂಡೇಶ್ವರದ ಮಾಲ್ ಒಂದರಲ್ಲಿ ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್‌ನಿಂದ ಸುಲ್ತಾನ್ (22) ಎಂಬಾತ ಮೃತಪಟ್ಟ ಘಟನೆ ಸಂಭವಿಸಿದೆ.
ಸೋಮವಾರ ರಾತ್ರಿ ಮಾಲ್‌ನ 2ನೇ ಮಹಡಿಯಲ್ಲಿ ಸುಲ್ತಾನ್ ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದಿತ್ತು. ಗಂಭೀರ ಗಾಯಗೊಂಡ ಆತನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದ ಎನ್ನಲಾಗಿದೆ. ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮರದ ದಿಮ್ಮಿಗೆ ಬಸ್ ಡಿಕ್ಕಿ: ಪ್ರಯಾಣಿಕ ಗಾಯ
ಮಂಗಳೂರು: ವಿಮಾನ ನಿಲ್ದಾಣಕ್ಕೆ ಸಾಗುವ ಕಾವೂರು- ಬೋಂದೇಲ್ ರಸ್ತೆಗೆ ಬಿದ್ದ ಮರವನ್ನು ಪೂರ್ತಿಯಾಗಿ ತೆರವುಗೊಳಿಸದ ಪರಿಣಾಮ ಮಂಗಳವಾರ ಸಂಜೆ ಬಸ್ ಅಪಘಾತಕ್ಕೀಡಾಗಿ ಪ್ರಯಾಣಿಕ ಗಾಯಗೊಂಡ ಘಟನೆ ನಡೆದಿದೆ.
ಸೋಮವಾರ ರಾತ್ರಿ ಮಳೆಗೆ ಬೃಹತ್ ಮರವೊಂದು ಬಿದ್ದಿದ್ದು, ಮಂಗಳೂರು ಮಹಾನಗರ ಪಾಲಿಕೆ ಮರ ಪೂರ್ತಿ ತೆರವಿಗೆ ಯಾವುದೇ ಕ್ರಮಕೈಗೊಂಡಿರಲಿಲ್ಲ. ಸಂಜೆ ವೇಳೆಗೆ ಧಾರಾಕಾರ ಮಳೆ ಸುರಿಯಲಾರಂಭಿಸಿದ್ದು, ಬಸ್ಸೊಂದು ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕರೊಬ್ಬರು ಗಾಯಗೊಡರು.
ರಮಾನಾಥ ರೈಗೆ ಘೇರಾವು: ಮರ ತೆರವುಗೊಳಿಸದೆ ಬಸ್ ಅಪಘಾತಕ್ಕೀಡಾಗಿದ್ದರಿಂದ ಆಕ್ರೋಶಗೊಂಡಿದ್ದ ಸ್ಥಳೀಯರು ಇದೇ ಮಾರ್ಗದಲ್ಲಿ ಸಂಜೆ ಬೆಂಗಳೂರಿಗೆ ತೆರಳಲು ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಗೆ ಸ್ಥಳೀಯರು ಘೇರಾವು ಹಾಕಿದ ಘಟನೆ ನಡೆದಿದೆ. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಬೇಕಾಯಿತು.