ಹಿಡಿದ ಮೀನು ಅಲ್ಪ ಪಡೆದ ಲಾಭ ಹೆಚ್ಚು
ಉಡುಪಿ: ಉಡುಪಿ ಜಿಲ್ಲೆಯ ಮೀನುಗಾರರು ಈ ಬಾರಿಯೂ ಸಕತ್ ಲಾಭ ಗಳಿಸಿದ್ದಾರೆ. ವಿಶೇಷ ಎಂದರೆ ಈ ಬಾರಿ ಜಿಲ್ಲೆಯಲ್ಲಿ ಕಡಲ ಮೀನು ಇಳುವರಿಯಲ್ಲಿ ಭಾರಿ ಇಳಿಕೆಯಾಗಿದೆ, ಆದರೂ ಮೀನುಗಾರರಿಗೆ ನಷ್ಟವಾಗಿಲ್ಲ, ಆದಾಯದಲ್ಲಿ ಭರ್ಜರಿ ಏರಿಕೆಯಾಗಿದೆ.
ಹಿಂದಿನ ವರ್ಷಕ್ಕೆ ಹೋಲಿಸಿದರೆ 2013- 14ರಲ್ಲಿ ಉಡುಪಿ ಜಿಲ್ಲೆಯ ಮೀನುಗಾರರು ಹಿಡಿದ ಮೀನಿನ ಪ್ರಮಾಣದಲ್ಲಿ 814 ಮೆಟ್ರಿಕ್ ಟನ್ನಷ್ಟು ಇಳಿಕೆಯಾಗಿದೆ. ಆದರೆ ಆದಾಯ 357 ಕೋಟಿಯಷ್ಟು ಏರಿಕೆಯಾಗಿದೆ.
2012 - 13ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ ಮಲ್ಪೆಯಲ್ಲಿರುವ ಸರ್ವಋತು ಮೀನುಗಾರಿಕಾ ಬಂದರಿನಲ್ಲಿ 1,24,532 ಮೆಟ್ರಿಕ್ ಟನ್ ಮೀನು ಹಿಡಿಯಲಾಗಿತ್ತು, ಮಾರುಕಟ್ಟೆಯಲ್ಲಿ ಇದಕ್ಕೆ 7879.60 ಕೋಟಿ ಬೆಲೆ ಸಿಕ್ಕಿತ್ತು. 2013 - 14ನೇ ಸಾಲಿನಲ್ಲಿ 1,23,718 ಮೆಟ್ರಿಕ್ ಟನ್ ಮೀನು ಹಿಡಿಯಲಾಗಿತ್ತು. ಸಿಕ್ಕಿದ ಮೀನುಗಳ ಪ್ರಮಾಣ ಕಡಿಮೆಯಾದರೂ ಲಾಭ ಮಾತ್ರ 8,236.71 ಕೋಟಿಯಷ್ಟಾಗಿದೆ.
2012 - 13ನೇ ಸಾಲಿನಲ್ಲಿಯೂ ಉಡುಪಿ ಜಿಲ್ಲೆಯ ಮೀನುಗಾರರು ಐತಿಹಾಸಿಕ ಲಾಭ ಗಳಿಸಿದ್ದರು. 2011 - 12ನೇ ಸಾಲಿನಲ್ಲಿ 1,24,891 ಮೆಟ್ರಿಕ್ ಟನ್ಗಳಷ್ಟು ಮೀನು ಹಿಡಿಯಲಾಗಿತ್ತು. ಇದಕ್ಕೆ ಮಾರುಕಟ್ಟೆಯಲ್ಲಿ 5465.40 ಕೋಟಿ ಬೆಲೆ ಸಿಕ್ಕಿತ್ತು. ಈ ಎರಡೂ ಸಾಲಿನಲ್ಲಿ ಹಿಡಿದ ಮೀನಿನ ಪ್ರಮಾಣದಲ್ಲಿ ವ್ಯತ್ಯಾಸ ಆಗಿಲ್ಲ, ಆದರೆ ಆದಾಯದಲ್ಲಿ ಮಾತ್ರ 2414 ಕೋಟಿ ಏರಿಕೆಯಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಗಳಿಸಿದ ಲಾಭ ಕಡಿಮೆಯಾದರೂ, ಮೀನುಗಾರರಿಗೆ ನಿರಾಸೆಯಂತೂ ಆಗಿಲ್ಲ.
ಬೆಲೆ ದುಬಾರಿ, ಬೇಡಿಕೆ ಹೆಚ್ಚು...
ಈ ಬಾರಿ ಮಾರುಕಟ್ಟೆಯಲ್ಲಿ ಮೀನಿನ ಬೆಲೆ ಸ್ವಲ್ಪ ದುಬಾರಿಯಾಗಿತ್ತು. ಜೊತೆಗೆ ಮೀನುಗಾರರ ಬಲೆಗೆ ಒಳ್ಳೆಯ ಬೇಡಿಕೆ ಇರುವ ಮೀನುಗಳು ಸಿಕ್ಕಿದ್ದವು. ಇದರಿಂದ ಮೀನುಗಾರರಿಗೆ ಒಳ್ಳೆಯ ಬೆಲೆ ಕೂಡ ದೊರಕಿದೆ. ಆದ್ದರಿಂದ ಒಟ್ಟಾರೆ ಮೀನು ಇಳುವರಿ ಕಡಿಮೆಯಾಗಿದ್ದರೂ ಆದಾಯದಲ್ಲಿ ಹೆಚ್ಚಳವಾಗಿದೆ.