ಉಪ್ಪಿನಂಗಡಿ: ಮಲೇರಿಯಾ ಬಾಧೆಗೆ ಪಾತ್ರೆ ವರ್ತಕ ಬಲಿ
ಉಪ್ಪಿನಂಗಡಿ: ಇಲ್ಲಿನ ಹಳೆ ಬಸ್ ನಿಲ್ದಾಣ ಬಳಿಯ ಸೂರಪ್ಪ ಕಾಂಪೌಂಡ್ ನಿವಾಸಿ, ಅಲ್ಯೂಮಿನಿಯಂ ಪಾತ್ರೆಗಳ ಮಾರಾಟಗಾರ ಜಗನ್ನಾಥ್ (57) ಶುಕ್ರವಾರ ನಿಧನರಾಗಿದ್ದು, ಸಾವಿಗೆ ಮಲೇರಿಯಾ ಕಾರಣ ಎನ್ನಲಾಗಿದೆ.
ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಇವರು, ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಗೆ ಒಳಗಾಗಿದ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಉಪ್ಪಿನಂಗಡಿ ಅಂಚೆ ಕಚೇರಿ ಬಳಿ ಅಲ್ಯೂಮಿನಿಯಂ, ಹಿತ್ತಾಳೆ ಪಾತ್ರೆಗಳ ವ್ಯಾಪಾರಿಯಾಗಿದ್ದ ಜಗನ್ನಾಥ್ ಕೆಲ ದಿನಗಳಿಂದ ಮಲೇರಿಯಾ ರೋಗಕ್ಕೆ ತುತ್ತಾಗಿದ್ದು, ಕಾಡುತ್ತಿದ್ದ ಜ್ವರಕ್ಕೆ ಔಷಧ ತೆಗೆದುಕೊಳ್ಳುತ್ತಿದ್ದಂತೆಯೇ ಜಾಂಡೀಸ್ ರೋಗ ಲಕ್ಷಣಗಳು ಜೊತೆಯಲ್ಲೇ ಕಾಣಿಸಿಕೊಂಡು, ರೋಗ ಉಲ್ಬಣಗೊಂಡಿತ್ತು ಎನ್ನಲಾಗಿದೆ. ಪತ್ನಿ, ಇಬ್ಬರು ಮಕ್ಕಳಿದ್ದಾರೆ.
ಸ್ವಚ್ಛತೆ ಪರಿಶೀಲನೆ ನಾಟಕ: ಉಪ್ಪಿನಂಗಡಿ ಗ್ರಾ.ಪಂ. ಕಚೇರಿ ಎದುರು ಭಾಗದಲ್ಲೇ ನಿರ್ಮಾಣವಾಗುವ ಕಟ್ಟಡದ ಕಾರ್ಮಿಕನೊಬ್ಬ (ಬಿಹಾರ ಮೂಲದ ವ್ಯಕ್ತಿ) ಮಲೇರಿಯಾ ರೋಗಕ್ಕೆ ಇತ್ತೀಚೆಗೆ ಬಲಿಯಾಗಿದ್ದು, ಜಿಲ್ಲೆಯ ಆರೋಗ್ಯ ಅಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಾಟಕವಾಡಿದ್ದು ಬಿಟ್ಟರೆ ನಂತರ ಯಾವುದೇ ಕ್ರಮ ಕೈಗೊಂಡಿಲ್ಲ. ಮಲೇರಿಯಾದಂತಹ ಮಾರಾಣಾಂತಿಕ ರೋಗಕ್ಕೆ ಇನ್ನಷ್ಟು ಬಲಿಯಾಗುವ ಮುನ್ನ ಸ್ಥಳೀಯ ಆಡಳಿತ ವ್ಯವಸ್ಥೆ ಕೊಳಚೆಯನ್ನು ನಿರ್ಮೂಲನಗೊಳಿಸಿ, ಚರಂಡಿ, ಪರಿಸರ ಸ್ವಚ್ಛತೆಯತ್ತ ಗಮನಹರಿಸಬೇಕಿದೆ.