ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಮೊಬೈಲ್ ಬ್ಯಾಂಕಿಂಗ್ ಸೇವೆ ಶೀಘ್ರ: ರಾಜೇಂದ್ರ ಕುಮಾರ್
ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಶತಮಾನೋತ್ಸವ ಸಂದರ್ಭ ಶೀಘ್ರದಲ್ಲೇ ತನ್ನ ಗ್ರಾಹಕರಿಗೆ ಮೊಬೈಲ್ ಬ್ಯಾಂಕಿಂಗ್ ಸೇವೆ ನೀಡಲಿದೆ. ಈ ಮೂಲಕ ಸಹಕಾರಿ ರಂಗದಲ್ಲಿ ಈ ಸೇವೆ ನೀಡುವ ಪ್ರಥಮ ಬ್ಯಾಂಕ್ ತಮ್ಮದಾಗಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್ ಹೇಳಿದ್ದಾರೆ.
ಸಂಪಾಜೆಯಲ್ಲಿ ಬ್ಯಾಂಕಿನ 72ನೇ ಶಾಖೆಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಪಾಜೆ ಪ್ರಾಥಮಿಕ ಸಹಕಾರಿ ವ್ಯವಸಾಯಿಕ ಬ್ಯಾಂಕ್‌ಗೆ # 2 ಲಕ್ಷ ಧನಸಹಾಯ ನೀಡುವುದಾಗಿ ಅವರು ಘೋಷಿಸಿದರು.
ಕಳೆದ ಕೆಲವು ಸಮಯದಿಂದ ಸ್ಥಗಿತಗೊಂಡಿದ್ದ ದೀರ್ಘಾವಧಿ ಸಾಲ ನೀಡುವ ಪ್ರಕ್ರಿಯೆ ಈ ತಿಂಗಳಲ್ಲಿ ಮತ್ತೆ ಆರಂಭವಾಗಲಿದೆ. ಸ್ವಲ್ಪ ಭಾಗವನ್ನು ಈ ತಿಂಗಳಲ್ಲಿ ಪ್ರಾಥಮಿಕ ಸಹಕಾರಿಗಳಿಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ವಾಹನ ಸಾಲ-ಬಡ್ಡಿ ಇಲ್ಲ: ಗ್ರಾಮೀಣ ಪ್ರದೇಶಗಳು ಬೆಳೆಯಬೇಕು. ಅಲ್ಲಿನ ಜನತೆ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಸಂಪಾಜೆ ಶಾಖೆಯಲ್ಲಿ 1 ತಿಂಗಳ ಅವಧಿಯೊಳಗೆ ವಾಹನ ಸಾಲ ಪಡೆದರೆ ಅದಕ್ಕೆ ಯಾವುದೇ ಬಡ್ಡಿ ಇಲ್ಲ ಎಂದು ರಾಜೇಂದ್ರ ಕುಮಾರ್ ಪ್ರಕಟಿಸಿದರು.
ಶತಮಾನೋತ್ಸವ ವರ್ಷದ ಅಂತ್ಯದೊಳಗೆ 101ನೇ ಶಾಖೆ ಆರಂಭಿಸಲಾಗುತ್ತದೆ ಎಂದವರು ತಿಳಿಸಿದರು.
ಬ್ಯಾಂಕ್‌ನ ಭದ್ರತಾಕೋಶವನ್ನು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಉದ್ಘಾಟಿಸಿದರು. ಗಣಕೀಕರಣ ಸೇವೆಯನ್ನು ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಜಿ.ಕೆ. ಹಮೀದ್ ಉದ್ಘಾಟಿಸಿದುರ.
ಸಂಪಾಜೆ ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಉಪಾಧ್ಯಕ್ಷ ರಾಜಾರಾಮ ಕೀಲಾರ್ ಮಾತನಾಡಿ, ಡಿಸಿಸಿ ಬ್ಯಾಂಕ್ ಸಾಧನೆಯ ಹಿನ್ನೆಲೆ ಅಧ್ಯಯನ ಆಗಬೇಕು ಎಂದರು.
ಅರಂತೋಡು- ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪಿ.ಬಿ. ದಿವಾಕರ ರೈ, ಕಟ್ಟಡ ಮಾಲೀಕ ನಾಗಪ್ಪ ಗೌಡ ಅರಂಬೂರು, ಸುಳ್ಯ ತಾ.ಪಂ. ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಎಪಿಎಂಸಿ ಅಧ್ಯಕ್ಷ ಸತೀಶ್ ಕೂಜುಗೋಡು, ಸುಳ್ಯ ನ.ಪಂ. ಅಧ್ಯಕ್ಷ ಎನ್.ಎ. ರಾಮಚಂದ್ರ, ಬ್ಯಾಂಕ್ ನಿರ್ದೇಶಕ ಎಸ್.ಬಿ. ಜಯರಾಮ ರೈ ಇದ್ದರು.
ತಾಲೂಕಿನ ಪ್ರಾಥಮಿಕ ಸಹಕಾರಿ ಸಂಘಗಳ ವತಿಯಿಂದ ರಾಜೇಂದ್ರಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕಟ್ಟಡ ಮಾಲೀಕ ನಾಗಪ್ಪ ಗೌಡ, ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ದಾಮೋದರ ಕೇನಾಜೆ ಸೇರಿದಂತೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು.
ಬ್ಯಾಂಕ್ ನಿರ್ದೇಶಕ ಕೆ.ಎಸ್. ದೇವರಾಜ್ ಸ್ವಾಗತಿಸಿದರು. ಬಿ. ಶಶಿಕುಮಾರ್ ರೈ ವಂದಿಸಿದರು. ಕೆ.ಟಿ. ವಿಶ್ವನಾಥ ನಿರೂಪಿಸಿದರು