ಬಾವಿಗೆ ಬಿದ್ದು ಮಹಿಳೆ ಸಾವು
ಬೆಳ್ತಂಗಡಿ: ಮುಂಡಾಜೆ ಸಮೀಪದ ನಿಡಗಲ್ ಎಂಬಲ್ಲಿ ಮಹಿಳೆಯೊಬ್ಬರು ತಡೆಗೋಡೆಯಿಲ್ಲದ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಭವಿಸಿದೆ. ನಿಡಗಲ್ ನಿವಾಸಿ ನರಸಿಂಹ ಶೆಣೈ ಎಂಬವರ ಪತ್ನಿ ನಮಿತಾ (37) ಮೃತರು. ಮನೆಯ ಸಮೀಪದ ತಡೆಗೋಡೆ ಇಲ್ಲದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೃದಯಾಘಾತ: ವ್ಯಕ್ತಿ ಸಾವು
ಬೆಳ್ತಂಗಡಿ: ನಡ ಗ್ರಾಮದ ವೆಂಕಪ್ಪ (55) ಎಂಬವರು ಕೆಲಸಕ್ಕೆ ತೆರಳಿದ್ದ ಮನೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ. ಮೃತರು ಕೆಲ ದಿನಗಳಿಂದ ನಡದ ಮನೆಯೊಂದರಲ್ಲಿ ಕೆಲಸಕ್ಕಿದ್ದು ಅಲ್ಲಿಯೇ ತಂಗುತ್ತಿದ್ದರು. ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದು ಕೆಲಸಕ್ಕಿದ್ದ ಮನೆಯವರ ಗಮನಕ್ಕೆ ಬಂದು, ಕೂಡಲೇ ಅವರು ಮೃತರ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಮೃತರ ಮನೆಯವರು ಹೃದಯಾಘಾತದಿಂದ ಮೃತ ಪಟ್ಟಿರುವುದಾಗಿ ಬೆಳ್ತಂಗಡಿ ಠಾಣೆಗೆ ತಿಳಿಸಿದ್ದು ಪ್ರಕರಣ ದಾಖಲಾಗಿದೆ.
ಯುವಕ ನಾಪತ್ತೆ: ದೂರು
ಬಂಟ್ವಾಳ: ಅನಂತಾಡಿಯ ದೊಡ್ಡಪ್ಪನ ಮನೆಗೆ ಬಂದಿದ್ದ ಪುತ್ತೂರಿನ ಯುವಕ ನಾಪತ್ತೆಯಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಾಗಿದೆ. ಪುತ್ತೂರು ನೆಹರೂ ನಗರ ಸೌಭಾಗ್ಯ ಗಣೇಶ್ಭಾಗ್ ನಿವಾಸಿ ಪುರುಷೋತ್ತಮ ಶೆಟ್ಟಿ ಎಂಬವರ ಮಗ ಗೌತಮ್ (20) ನಾಪತ್ತೆಯಾದಾತ. ಪುತ್ತೂರಿನ ಅನಂತಾಡಿಯ ಚಿಕ್ಕಪ್ಪನ ಮನೆಗೆಂದು ಬಂದಿದ್ದ ಈತ ಗುರುವಾರ ಬೆಳಗ್ಗೆ ಅಣ್ಣ ರಾಮಪ್ರಸಾದ ಜೊತೆ ಮಂಗಳೂರಿಗೆ ಹೊರಟಿದ್ದ. ಈ ನಡುವೆ ಕಲ್ಲಡ್ಕದಲ್ಲಿ ಪುತ್ತೂರಿಗೆ ಹೋಗುವುದಾಗಿ ಹೇಳಿ ಕಾರಿನಿಂದ ಇಳಿದ ಗೌತಮ್, ಬಳಿಕ ನಾಪತ್ತೆಯಾಗಿದ್ದಾನೆ. ಆತನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಆತನನ್ನು ಹುಡುಕಿಕೊಡಿ ಎಂದು ಆತನ ತಂದೆ ಪುರುಷೋತ್ತಮ ಶೆಟ್ಟಿ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ. 5 ಅಡಿ 10 ಇಂಚು ಎತ್ತರವಿರುವ ಗೌತಮ್ ಬಿಳಿ ಮೈ ಬಣ್ಣ ಹೊಂದಿದ್ದು, ಕನ್ನಡ -ತುಳು ಮಾತನಾಡುತ್ತಾನೆ. ಈತನ ಬಗ್ಗೆ ಮಾಹಿತಿ ದೊರೆತವರು ಬಂಟ್ವಾಳ ನಗರ ಠಾಣೆ (08255- 232111) ಸಂಪರ್ಕಿಸುವಂತೆ ತಿಳಿಸಿದ್ದಾರೆ.