ಮೂಲ್ಕಿ ಆಸ್ಪತ್ರೆಯ ತೆರೆದ ಕೊಳವೆ ಬಾವಿ ಮುಚ್ಚಲು ಡಿಸಿ ಸೂಚನೆ
ಮೂಲ್ಕಿ: ಜಿಲ್ಲೆಯಲ್ಲಿ ನಿರುಪಯುಕ್ತವಾಗಿರುವ ಕೊಳವೆ ಬಾವಿಗಳನ್ನು ಮೂರು ದಿನಗಳ ಒಳಗೆ ಪತ್ತೆ ಹಚ್ಚಿ ವಾರದೊಳಗೆ ಮುಚ್ಚುವಂತೆ ಆದೇಶ ನೀಡಿದ್ದು ತಪ್ಪಿದಲ್ಲಿ ಕಾನೂನ ಕ್ರಮ ತೆಗೆದು ಕೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಹೇಳಿದರು.
ಮೂಲ್ಕಿ ನಗರ ಪಂಚಾಯಿತಿ ಸಭಾಭವನದಲ್ಲಿ ಜರುಗಿದ ನಪಂನ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು 'ಕನ್ನಡಪ್ರಭ'ದಲ್ಲಿ ಬಂದ ವರದಿ ತೋರಿಸಿ, ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿನ ತೆರೆದ ಕೊಳವೆ ಬಾವಿ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಯಿಂದ ಸ್ಪಷ್ಟನೆ ಕೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ, ತಮ್ಮ ಗಮನಕ್ಕೆ ಬಂದಿದ್ದು ಕೂಡಲೇ ಮುಚ್ಚುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಸರ್ಕಾರವು ಅನಧಿಕೃತ ಮನೆಗಳ ಸಕ್ರಮಕ್ಕೆ ಆದೇಶ ನೀಡಿದ್ದು, ತಹಸೀಲ್ದಾರ್ ಸೇರಿದಂತೆ ಅಧಿಕಾರಿಗಳು ಅರ್ಜಿ ಪಡೆಯಲು ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದೆಂದು ತಿಳಿಸಿದರು.
ಮೂಲ್ಕಿಗೆ ವಿಶೇಷ ತಹಸೀಲ್ದಾರ್ ನೇಮಕವಾಗಿದ್ದು, ಜಾಗದ ಕೊರತೆಯಿಂದ ನಾಡಕಚೇರಿಯಲ್ಲಿ ಸಮಸ್ಯೆಯಾಗಿದೆ. ಮೂಲ್ಕಿ ನಪಂ ವ್ಯಾಪ್ತಿಯ ಗೇರುಕಟ್ಟೆಯಲ್ಲಿ 1.9 ಎಕರೆ ಜಾಗ ಮೀಸಲಿರಿಸಿದ್ದು ಅದರಲ್ಲಿ ಪಡಶಾಲೆಯನ್ನು ನಿರ್ಮಿಸುವುದಾಗಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವ ಕೆ. ಅಭಯಚಂದ್ರ ಜೈನ್ ತಿಳಿಸಿದರು.
ತಾಲೂಕು ರಚನೆಗೆ ಪ್ರಸ್ತಾವನೆ ಸಲ್ಲಿಕೆ: ಮೂಲ್ಕಿ ಹೋಬಳಿಗೆ ಕೆಲವು ಗ್ರಾಮಗಳನ್ನು ಸೇರಿಸಿ ತಾಲೂಕು ರಚನೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಸಚಿವರು ತಿಳಿಸಿದರು.
ತಹಸೀಲ್ದಾರ್ ಡಾ. ಪ್ರಶಾಂತ್, ವಿಶೇಷ ತಹಸೀಲ್ದಾರ್ ಎ.ಜಿ. ಖೇಣೆ, ಆರೋಗ್ಯ, ಕಂದಾಯ, ಲೋಕೋಪಯೋಗಿ, ಒಳಚರಂಡಿ ಯೋಜನೆ, ಕೆಡಿಪಿ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು, ನಪಂ ಅಧ್ಯ.ಕ್ಷೆ ಮೀನಾಕ್ಷಿ ಬಂಗೇರ, ಉಪಾಧ್ಯಕ್ಷೆ ವಸಂತಿ ಭಂಡಾರಿ, ಮುಖ್ಯಾಧಿಕಾರಿ ವಾಣಿ ಆಳ್ವ ಇದ್ದರು.