ರಾಷ್ಟ್ರೀಯ ಹೆದ್ದಾರಿ ಪಕ್ಕ ಅಪಾಯಕಾರಿ ಕೊಳವೆಬಾವಿ
ಮೂಲ್ಕಿ: ಇಲ್ಲಿನ ಸಿಎಸ್‌ಐ ಬಾಲಿಕಾಶ್ರಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಏಕಮುಖ ರಸ್ತೆಯಲ್ಲಿ ಉಡುಪಿ ಸಂಪರ್ಕ ದಾರಿಯಲ್ಲಿ ನಿರುಪಯುಕ್ತ ಕೊಳವೆ ಬಾವಿ ಕಂಡುಬಂದಿದ್ದು ಅದಕ್ಕೆ ಬಟ್ಟೆ ಸುತ್ತಿ ಮೇಲೆ ಕಲ್ಲು ಮುಚ್ಚಿಡಲಾಗಿದೆ. ಇದು ಸಿಎಸ್‌ಐ ಬಾಲಿಕಾಶ್ರಮದ ಮಕ್ಕಳು ಹಾಗೂ ಸಮೀಪದ ಯುಬಿಎಂಸಿ ಹಿರಿಯ ಪ್ರಾಥಮಿಕ ಶಾಲೆಯ ಚಿಕ್ಕ ಮಕ್ಕಳು ಓಡಾಡುವ ದಾರಿಯಾಗಿದ್ದು ಕಲ್ಲು ಸರಿಸಿದಲ್ಲಿ ಮೃತ್ಯುವಿಗೆ ಆಹ್ವಾನ ನೀಡುವ ಸ್ಥಿತಿಯಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣಗೊಳ್ಳುವ ಮೊದಲು ನ.ಪಂ. ಇಲ್ಲಿ ಕೊಳವೆ ಬಾವಿ ಚೋಡಿದ್ದು ಉತ್ತಮ ನೀರಿದ್ದರಿಂದ ಕೊಳವೆಬಾವಿಯ ಸಮೀಪದ ಪಂಪು ಹೌಸ್ ನಿರ್ರ್ಮಿಸಿ ಒಡೆಯರಬೆಟ್ಟು ಪರಿಸರಕ್ಕೆ ನೀರು ಸರಬರಾಜು ಮಾಡುತ್ತಿತ್ತು. ಹೆದ್ದಾರಿ ಅಗಲೀಕರಣ ಸಂದರ್ಭ ಕೊಳವೆ ಬಾವಿ ಹೆದ್ದಾರಿ ನಿರ್ಮಾಣದ ವ್ಯಾಪ್ತಿಗೆ ಬಂದದ್ದರಿಂದ ಅದರಲ್ಲಿದ್ದ ಪಂಪನ್ನು ಹೊರ ತೆಗೆಯಲಾಯಿತು. ಆದರೆ ಅದನ್ನು ಮುಚ್ಚದೆ ಕೇವಲ ಬಟ್ಟೆ ಕಟ್ಟಿ ಹಾಗೆಯೇ ಬಿಡಲಾಗಿದೆ. ಹತ್ತಿರದ ಪಂಪು ಶೆಡ್‌ನ ಕಬ್ಬಿಣದ ಬಾಗಿಲು ಕೂಡ ಮುರಿದಿದ್ದು ತೆರೆದುಕೊಂಡಿದೆ. ವಿದ್ಯುತ್ ಸ್ವಿಚ್‌ಗಳು ನೇತಾಡುವ ಸ್ಥಿತಿಯಲ್ಲಿವೆ. ಸ್ಥಳೀಯ ಆಡಳಿತ ಈ ಬಗ್ಗೆ ಗಮನ ಹರಿಸಿಲ್ಲ. ಶಾಲೆಯ ಮಕ್ಕಳು ಕೊಳವೆ ಬಾವಿಯ ಸಮೀಪದಲ್ಲಿ ಸಂಚರಿಸುವುದರಿಂದ ಅಪಾಯ ಕಟ್ಟಿಟ್ಟ ಬುಟ್ಟಿಯಾಗಿದ್ದು ಕೂಡಲೇ ಪಂಚಾಯಿತಿ ಈ ಬಗ್ಗೆ ಗಮನ ಹರಿಸಬೇಕಾಗಿದೆ. ಮೂಲ್ಕಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೂಡ ತೆರೆದ ಕೊಳವೆ ಬಾವಿ ಕಂಡು ಬಂದಿದ್ದು ತಾತ್ಕಾಲಿಕ ನೆಲೆಯಲ್ಲಿ ಕಲ್ಲು ಇಟ್ಟಿದ್ದಾರೆ. ಜಿಲ್ಲಾ ಆರೋಗ್ಯ ಅಧಿಕಾರಿ ಕೂಡಲೇ ಸೂಕ್ತ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಅದಕ್ಕೆ ಮೊದಲು ಕಿಡಿಗೇಡಿಗಳು ಕಲ್ಲು ಸರಿಸಿದಲ್ಲಿ ಮೃತ್ಯುವಿಗೆ ನೇರ ಅಹ್ವಾನ ನೀಡಿದಂತೆಯೇ ಸರಿ.