ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಟೀಲು: ವಿಲೇವಾರಿಗೆ 'ಕಸ'ರತ್ತು

Rashmi Kasaragodu
Updated On : 25 Jun 2014, 12:03 pm

ಪ್ರಕಾಶ್ ಮೂಲ್ಕಿ
ಮೂಲ್ಕಿ: ಕಸ ವಿಲೇವಾರಿಗೆ ಸಂಬಂಧಿಸಿ ಮೂಲ್ಕಿ ವ್ಯಾಪ್ತಿಯಲ್ಲಿ ಅಷ್ಟೇನು ಸಮಸ್ಯೆ ಇಲ್ಲದಿದ್ದರೂ ಕಟೀಲು ದೇವಳ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ದೊಡ್ಡ ಸವಾಲಾಗಿದೆ.
ಕಟೀಲು ಕ್ಷೇತ್ರದ ಬಸ್ ನಿಲ್ದಾಣ ಸಮೀಪದ ಅಂಗಡಿಗಳಿಂದ ಉಂಟಾಗುವ ತ್ಯಾಜ್ಯ ಸೂಕ್ತ ರೀತಿಯಲ್ಲಿ ವಿಲೇವಾರಿಯಾಗದೆ ಆಗಾಗ ಸಮಸ್ಯೆಗಳು ಉದ್ಭವವಾಗುತ್ತಿವೆ. ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುವುದರಿಂದ ಅಲ್ಲಲ್ಲಿ ಕಸದ ರಾಶಿಗಳು ತುಂಬಿಕೊಳ್ಳುವುದು ಇದೆ.
ದೇವಳದವರು ಕೆಲವೊಂದು ಬಾರಿ ದೇವರ ಅಭಿಷೇಕದ ಸೀಯಾಳಗಳನ್ನು ದೇವಳ ಪರಿಸರದಲ್ಲೇ ರಾಶಿ ಹಾಕುವುದರಿಂದ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿವೆ.
ಗೋಮಾಳಕ್ಕೆ ಎಂಜಲೆಲೆ: ದೇವಳದಲ್ಲಿ ಪ್ರತಿನಿತ್ಯ ಸುಮಾರು 2000 ಮಂದಿಗೆ ಅನ್ನ ಸಂತರ್ಪಣೆಯಾಗುತ್ತದೆ. ಇದರಿಂದ ಉಂಟಾಗುವ ಎಂಜಲೆಲೆ, ದೇವರ ಅಭಿಷೇಕದ ಸೀಯಾಳಗಳನ್ನು ಮೊದಲು ನಂದಿನಿ ನದಿ ತಟದಲ್ಲಿ ಹಾಕಲಾಗುತ್ತಿತ್ತು.
ಇದರಿಂದ ಅನೇಕ ಸಮಸ್ಯೆಗಳು ಉದ್ಭವವಾದ ಕಾರಣ ಕಳೆದ ಕೆಲ ಸಮಯದಿಂದ ಮಾಂಜದಲ್ಲಿನ ದೇವಳದ ಸುಮಾರು 8 ಎಕ್ರೆ ವಿಸ್ತೀರ್ಣದ ಗೋಮಾಳದಲ್ಲಿ ತಂದು ರಾಶಿ ಹಾಕಲಾಗುತ್ತಿದೆ. ಆದರೆ, ವಿಲೇವಾರಿಗೆ ಸೂಕ್ತ ಕ್ರಮಕೈಗೊಂಡಿಲ್ಲ.
ಗೋಮಾಳ ಪರಿಸರದಲ್ಲಿ ಜನವಸತಿ ಇಲ್ಲದ ಕಾರಣ ಈವರೆಗೆ ಯಾವುದೇ ಸಮಸ್ಯೆ ಕಂಡುಬಂದಿಲ್ಲ.
ಡಿಸಿ ಭೇಟಿ ಪರಿಣಾಮ: ಕ್ಷೇತ್ರಕ್ಕೆ ಸೋಮವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಕಟೀಲು ದೇವಳ ಪರಿಸರದ ತ್ಯಾಜ್ಯ ವಿಲೇವಾರಿ ಜವಾಬ್ದಾರಿಯನ್ನು ಮಂಗಳೂರು ಮಹಾನಗರ ಪಾಲಿಕೆಗೆ ವಹಿಸಿಕೊಟ್ಟಿದ್ದಾರೆ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂದು ಕಾದುನೋಡಬೇಕು.
ಮೂಲ್ಕಿ-ಕಸ ಸಂಗ್ರಹ ಯೋಜನೆ: ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 17 ವಾರ್ಡ್‌ಗಳಿದ್ದು, 17288 ಜನಸಂಖ್ಯೆಯಿದೆ. ಕಳೆದ ನಾಲ್ಕು ವರ್ಷಗಳಿಂದ ಮನೆ ಮನೆಯಿಂದ ಕಸ ಸಂಗ್ರಹಿಸುವ ಯೋಜನೆಯನ್ನು ನಡೆಸಲಾಗುತ್ತಿದೆ.
ನಗರ ಪ್ರದೇಶದಲ್ಲಿ ಪ್ರತಿ ದಿನಕ್ಕೊಮ್ಮೆ ಹಾಗೂ ಒಳ ಪ್ರದೇಶದಲ್ಲಿ ಎರಡು ದಿನಕ್ಕೊಮ್ಮೆ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಈ ಪೈಕಿ ಮಾರಾಟ ಮಾಡಬಹುದಾದ ತ್ಯಾಜ್ಯ, ಒಣ, ಹಸಿ ಕಸ ವಿಂಗಡಿಸಿ ವಿಲೇವಾರಿ ಮಾಡಲಾಗುತ್ತಿದೆ. ಇದಕ್ಕಾಗಿ ನಿರ್ದಿಷ್ಟ ಶುಲ್ಕ ಸಂಗ್ರಹಿಸಲಾಗುತ್ತದೆ.
ತ್ಯಾಜ್ಯ ವಿಲೇವಾರಿ: ಮೂಲ್ಕಿಯ ಮೆಡಲಿನ್ ಶಾಲೆ ಬಳಿ ಇರುವ ತ್ಯಾಜ್ಯ ವಿಲೇವಾರಿ ಘಟಕ ಆರಂಭವಾಗುವಾಗ ಹಲವಾರು ವಿಘ್ನಗಳು ಎದುರಾಗಿದ್ದರೂ ನಂತರ ಹೈಕೋರ್ಟ್ ಆದೇಶದಂತೆ 2 ಎಕ್ರೆ ವಿಶಾಲ ಪ್ರದೇಶದಲ್ಲಿ ಡಂಪಿಂಗ್ ಯಾರ್ಡ್ ನಿರ್ಮಿಸಿದ್ದು, ತ್ಯಾಜ್ಯ ವಿಲೇವಾರಿಯಾಗುತ್ತಿದೆ.
ನ.ಪಂ. ಜನಜಾಗೃತಿ: ಈ ಬಾರಿ ಮಳೆಗಾಲ ಆರಂಭಕ್ಕೂ ಮುನ್ನವೇ ಎಚ್ಚೆತ್ತುಕೊಂಡಿರುವ ಮೂಲ್ಕಿ ನಗರ ಪಂಚಾಯಿತಿ ಸಾಂಕ್ರಾಮಿಕ ರೋಗ ತಡೆಗೆ ಮತ್ತು ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ನ.ಪಂ. ವ್ಯಾಪ್ತಿಯ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಿದೆ.
ಏಪ್ರಿಲ್‌ನಲ್ಲೇ ಡೆಂಘೀ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಪ್ರಕರಣಗಳು ಕಂಡು ಬಂದಿದ್ದರಿಂದ ಸಾಂಕ್ರಾಮಿಕ ರೋಗಗಳ ಕುರಿತು ಜನರಿಗೆ ಮಾಹಿತಿ ನೀಡಲು ಕರಪತ್ರಗಳನ್ನು ಮನೆಮನೆಗೆ ಹಂಚಲಾಗಿದೆ. ನ.ಪಂ. ವ್ಯಾಪ್ತಿಯಲ್ಲಿ ಫಾಗಿಂಗ್ ಮಾಡಿ ಸೊಳ್ಳೆಗಳನ್ನು ನಾಶ ಮಾಡುವ ಮೂಲಕ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement