ರು. 8 ಲಕ್ಷ ಬೆಲೆಯ ಕರಿಮೆಣಸು ಕದ್ದ 7 ಮಂದಿ ಬಂಧನ
ಮಂಗಳೂರು: ಮೂಡುಬಿದಿರೆ ಸಮೀಪದ ಪುತ್ತಿಗೆ ಹಂಡೇಲು ಗೋದಾಮಿನಿಂದ 8ಲಕ್ಷ ಮೌಲ್ಯದ ಕರಿಮೆಣಸು ಕದ್ದ 7 ಮಂದಿಯನ್ನು ಮೂಡುಬಿದರೆ ಪೊಲೀಸರು ಬಂಧಿಸಿದ್ದಾರೆ.
ಹರೀಶ್ ಕುಮಾರ್ ಕಲ್ಲಮುಂಡ್ಕೂರು, ನವೀನ್ ಮೂಡುಬಿದರೆ, ಸುಕೇಶ್ ಶೆಟ್ಟಿ ಕಾರ್ಯಗುಂಡಿ, ಯೋಗಿರಾಜ್ ನೆಲ್ಲಿಕಾರ್, ಪ್ರಶಾಂತ್, ಮಹೇಶ್, ಯೋಗೀಶ್ ಬಂಧಿತರು.
ಹಂಡೇಲು ಕೆಎಂಬಿ ಎಂಟರ್‌ಪ್ರೈಸಸ್‌ನ ಮುಖೇಶ್ ಕುಮಾರ್ ಪಾಟೀಲ್ ಎಂಬವರಿಗೆ ಸೇರಿದೆ ಗೋದಾಮಿನಲ್ಲಿ ತಲಾ 60 ಕಿಲೋ ಕರಿಮೆಣಸು ತುಂಬಿದ್ದ 21 ಬ್ಯಾಗ್‌ಗಳು ಸೋಮವಾರ ರಾತ್ರಿ ಕಳವಾಗಿತ್ತು. ಆರೋಪಿಗಳನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನೌಕರರು ಕೆಲಸಕ್ಕೆ ಬಂದಾಗ ಕಳವಾಗಿರುವುದು ತಿಳಿದು ಬಂದಿತ್ತು. ಕರಿಮೆಣಸು ಸರಬರಾಜು ಮಾಡುತ್ತಿದ್ದ ಹರೀಶ್ ಕಲ್ಲಮುಂಡ್ಕೂರು ಎಂಬಾತನ ಮೇಲೆ ಗೋದಾಮಿನ ಮಾಲೀಕರು ಸಂಶಯ ವ್ಯಕ್ತಪಡಿಸಿದ್ದರು. ಪೊಲೀಸರು ವಿಚಾರಣೆ ನಡೆಸಿದಾಗ ಕಳವು ಮಾಡಿರುವದನ್ನು ಒಪ್ಪಿಕೊಂಡಿದ್ದಾನೆ. ಕದ್ದ ಮಾಲನ್ನು ಹುಡ್ಕೊ ಕಾಲನಿ ಮನೆಯೊಂದರಲ್ಲಿ ಇರಿಸಿದ್ದರು. ಸ್ಕಾರ್ಪಿಯೋದಲ್ಲಿ ಅದನ್ನು ಸಾಗಿಸುವುದು ಅವರ ಉದ್ದೇಶವಾಗಿತ್ತು. ಮೂಡುಬಿದಿರೆ ಇನ್‌ಸ್ಪೆಕ್ಟರ್ ಅನಂತಪದ್ಮನಾಭ ನೇತೃತ್ವದಲ್ಲಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.