ಹಲ್ಲೆ ಆರೋಪಿಗಳ ಸೆರೆಗೆ ಆಗ್ರಹ
ಮಂಗಳೂರು: ಪೆರ್ಮನ್ನೂರು ಮದ್ರಸವೊಂದರ ಆಡಳಿತ ವಿಚಾರದಲ್ಲಿ ಮಸೀದಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಗುಂಪನ್ನು ರಾಜಕೀಯ ಕಾರಣಕ್ಕೆ ಪೊಲೀಸರು ಬಂಧಿಸುತ್ತಿಲ್ಲ. ಲೋಕಾಯುಕ್ತರ ಅದಾಲತ್‌ನಲ್ಲೂ ಆರೋಪಿಗಳ ಬಂಧನಕ್ಕೆ ಸೂಚಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಸೀದಿ ಪರ ವಕೀಲ ಎಸ್.ಎಸ್.ಖಾಜಿ ಆರೋಪಿಸಿದ್ದಾರೆ. ಮಸ್‌ಜಿಲ್ ಅಲ್ ಫುಕಾನ್‌ನ ಮದ್ರಸ ವಿಚಾರದಲ್ಲಿ ಮಸೀದಿ ಕಾರ್ಯಕರ್ತ ಅಶ್ರಫ್ ಅಜೀಜ್ ಮೇಲೆ ಏ.15ರಂದು 13 ಮಂದಿ ಸಲಫಿಗಳು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಮಂಗಳೂರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದು, ನ್ಯಾಯಾಲಯ ಆದೇಶದಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಸ್ಥಳೀಯ ಶಾಸಕರ ಹಸ್ತಕ್ಷೇಪದಿಂದ ಇನ್ಸ್‌ಪೆಕ್ಟರ್ ಆರೋಪಿಗಳನ್ನು ಬಂಧಿಸದೆ ಅವರಿಗೆ ನೆರವಾಗುತ್ತಿದ್ದಾರೆ ಎಂದು ಎಸ್.ಎಸ್.ಖಾಜಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ನಂತರ ಪುರಭವನದಲ್ಲಿ ನಡೆದ ಲೋಕಾಯುಕ್ತ ಅದಾಲತ್‌ನಲ್ಲೂ ಆರೋಪಿಗಳ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ. ಆದರೂ ಪೊಲೀಸರು ಸುಮ್ಮನಿದ್ದಾರೆ ಎಂದು ದೂರಿದರು. ಮಸೀದಿ ಉಪಾಧ್ಯಕ್ಷ ಉಮರಬ್ಬ, ಸದಸ್ಯರಾದ ಬಶೀರ್, ಮಸೂದ್ ಇದ್ದರು.