ಅಧಿಕೃತ ತುಳುಪಠ್ಯ ಒಂದೇ ಶಾಲೆಗೆ ಸೀಮಿತ
ಜಿತೇಂದ್ರ ಕುಂದೇಶ್ವರ
ಮಂಗಳೂರು: ಕರಾವಳಿ ಎರಡು ಜಿಲ್ಲೆಯ ಪ್ರೌಢಶಾಲೆಗಳಲ್ಲಿ ಅಧಿಕೃತವಾಗಿ ತುಳು ಪಠ್ಯ ಕಲಿಯುತ್ತಿರುವರು ಮಂಗಳೂರು ಪೋಂಪೈ ಪ್ರೌಢಶಾಲೆಯ ಹತ್ತನೇ ತರಗತಿಯ 27 ವಿದ್ಯಾರ್ಥಿಗಳು ಮಾತ್ರ!
2010ರಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 5ನೇ ತರಗತಿಗೆ ತುಳು ಪಠ್ಯ ಆರಂಭಿಸಿದಾಗ 8 ಸಾವಿರ ಪುಸ್ತಕ ಪಡೆದಿದ್ದರು, ಕ್ರಮೇಣ ಇಂಡೆಂಟ್ ಹತ್ತು ಸಾವಿರಕ್ಕೆ ತಲುಪಿತ್ತು. ಪ್ರತಿ ವರ್ಷ ಹೊಸ ತರಗತಿಗೆ ತುಳು ಪಠ್ಯ ಆಗುತ್ತಿರುವುದರಿಂದ ಪಠ್ಯಪುಸ್ತಕಗಳ ಸಂಖ್ಯೆ ಹೆಚ್ಚಬೇಕಿತ್ತು. ಆದರೆ ಇಳಿಮುಖವಾಗಿದೆ. ಈಗ ಒಟ್ಟು 978 ಪಠ್ಯಪುಸ್ತಕಗಳಿಗೆ ಮಾತ್ರ ಬೇಡಿಕೆ ಇದೆ. ಆದರೆ ಉಡುಪಿಯಲ್ಲಿ ತುಳು ಪಠ್ಯ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಶೂನ್ಯ!
5ರಿಂದ 10ನೇ ತರಗತಿ ವರೆಗೆ ಮೂರನೇ ಭಾಷೆಯಾಗಿ ಕನ್ನಡ ಲಿಪಿಯಲ್ಲಿಯೇ ತುಳು ಬೋಧಿಸಲಾಗುತ್ತಿದೆ. 2010ರಲ್ಲಿ 5ನೇ ತರಗತಿ ಶುರುವಾಗಿದ್ದು, 2014ರಲ್ಲಿ ಹತ್ತನೇ ತರಗತಿಗೆ ಪಠ್ಯ ಆರಂಭವಾಗಿದೆ.
'ಈ ಸಾರಿ ಬಹಳ ಕಡಿಮೆ ಇಂಡೆಂಟ್ ಹಾಕಿದ್ದಾರೆ, 978 ಪಠ್ಯಪುಸ್ತಕ ಕೇಳಿದ್ದಾರೆ, 8ನೇ ತರಗತಿ 312 ಪುಸ್ತಕ ಮಾತ್ರ ಬಾಕಿ ಇದೆ' ಎಂದು ಪಠ್ಯಪುಸ್ತಕ ವಿಭಾಗ ನೋಡಲ್ ಅಧಿಕಾರಿ ಶಂಕರಪ್ಪ ಮುದ್ನಾಳ್ ತಿಳಿಸಿದ್ದಾರೆ.
'ಉಡುಪಿಯ ಯಾವ ಶಾಲೆಗಳೂ ತುಳು ಪಠ್ಯಕ್ಕೆ ಬೇಡಿಕೆ ಇಟ್ಟಿಲ್ಲ. ಲೇಡಿಹಿಲ್ ಪೊಂಪೈ ಪ್ರೌಢಶಾಲೆಯಲ್ಲಿ ಪ್ರತ್ಯೇಕ ಟೈಮ್ ಟೇಬಲ್ ಮಾಡಿ ತುಳು ಪಠ್ಯ ಬೋಧಿಸುತ್ತಿದ್ದಾರೆ' ಎನ್ನುತ್ತಾರೆ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ.
ತುಳು ಸಾಹಿತ್ಯ ಅಕಾಡೆಮಿ ಪ್ರತಿ ತರಗತಿಯ 1 ಸಾವಿರ ಪುಸ್ತಕಗಳಂತೆ 5 ಸಾವಿರ ಪುಸ್ತಕ ಖರೀದಿಗೆ ಬೇಡಿಕೆ ಇಟ್ಟಿದೆ. ಕೆಲವು ಶಾಲೆಯವರು ಇಂಡೆಂಟ್ ಹಾಕಿರುವುದಿಲ್ಲ, ಶಾಲೆ ಶುರುವಾದ ಬಳಿಕ ಕೇಳುತ್ತಾರೆ, ಅಂಥ ಶಾಲೆಗಳ ಮುಖ್ಯಶಿಕ್ಷಕರು ಬಂದು ಪುಸ್ತಕ ಕೇಳಿದರೆ ಉಚಿತವಾಗಿ ನೀಡುತ್ತೇವೆ ಎನ್ನುತ್ತಾರೆ ರೈ.
ಪುಸ್ತಕ ಪಡೆದರೂ ಕೆಲವು ಶಾಲೆಗಳಲ್ಲಿ ಸರಿಯಾಗಿ ಪಾಠ ಮಾಡಿಲ್ಲ. ಕೆಲವೆಡೆ ಪಾಠ ಮಾಡಿದರೂ ಪರೀಕ್ಷೆ ಮಾಡಿಲ್ಲ. ತುಳು ಬೋಧಿಸಿ, ಹಿಂದಿ ಪರೀಕ್ಷೆ ನಡೆಸಿ ಅಂಕ ನಮೂದಿಸಿದ್ದಾರೆ. ಪೋಂಪೈ ಪ್ರೌಢಶಾಲೆಯಲ್ಲಿ ಮಾತ್ರ ತುಳು ಪಠ್ಯ ಎಂದೇ ಅಂಕ ನಮೂದಿಸಿದ್ದಾರೆ. ಅದ್ದರಿಂದ ಪೋಂಪೈ ಶಾಲೆಯದ್ದು ಮಾತ್ರ ಅಧಿಕೃತ ಎನ್ನುತ್ತಾರೆ ರಿಜಿಸ್ಟ್ರಾರ್.
ಮುಖ್ಯ ಶಿಕ್ಷಕರ ಬಳಿ ಈ ಕುರಿತು ಕೇಳಿದರೆ, ತುಳು ಪಠ್ಯ ಕಲಿಯುವ ವಿದ್ಯಾರ್ಥಿಗಳಿಗೆ ಹಿಂದಿ ಕೂಡಾ ಕಲಿಸುತ್ತೇವೆ. ಅವರು ತುಳು ಪರೀಕ್ಷೆ ಅಂಕ ಕೇಳಿದರೆ ಅದೇ ಅಂಕ ಹಾಕುತ್ತೇವೆ, ಹಿಂದಿ ಕೇಳಿದರೆ ಹಿಂದಿ ಪರೀಕ್ಷೆ ಅಂಕ ಹಾಕುತ್ತೇವೆ ಎಂದು ಹೇಳುತ್ತಾರೆ. ಅಂಥ ಶಾಲೆಗಳಲ್ಲಿ ತುಳು ಪಠ್ಯ ಹೆಚ್ಚುವರಿ ತರಗತಿ ನಡೆಸಿ ಬೋಧಿಸುತ್ತಾರೆ, ಆದರೆ ಅಂಕಪಟ್ಟಿಯಲ್ಲಿ ನಮೂದಿಸುತ್ತಿಲ್ಲ ಎನ್ನುತ್ತಾರೆ.
ಮಕ್ಕಳಿಗೆ ಆಸಕ್ತಿ ಇದೆ, ಆದರೆ ಪೋಷಕರು, ಶಿಕ್ಷಕರ ಬೆಂಬಲ ಸಿಕ್ಕಿಲ್ಲ, ಶಿಕ್ಷಣ ಇಲಾಖೆ ತಮಗೆ ಸಂಬಂಧಿಸಿದ್ದಲ್ಲ ಎಂಬಂತಿದೆ. ತುಳು ಸಾಹಿತ್ಯ ಅಕಾಡಮಿಯೂ ಸರ್ಕಾರಿ ಇಲಾಖೆಯಡಿ ಬರುವುದರಿಂದ ಹೆಚ್ಚಿನ ನಿರೀಕ್ಷೆ ಸಾಧ್ಯವಿಲ್ಲ.