ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಎಸ್‌ಐಗೆ ಇರಿತ: ಆರೋಪಿ ಬಂಧನ

Rashmi Kasaragodu
Updated On : 26 Jun 2014, 12:12 pm

ಮಂಗಳೂರು: ರೌಡಿಯ ಬಂಧನಕ್ಕೆ ತೆರಳಿದ್ದ ವೇಳೆ ಚೂರಿ ಇರಿತದಿಂದ ಗಾಯಗೊಂಡಿದ್ದ ಪಣಂಬೂರು ಎಸ್‌ಐ ಮತ್ತು ಮೂವರು ಪೊಲೀಸರು ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ. ಚೂರಿಯಿಂದ ಇರಿದ ಆರೋಪಿ ಅಬ್ದುಲ್ ಸಲಾಂ ಕೂಡಾ ಗಾಯಗೊಂಡಿದ್ದು, ಚಿಕಿತ್ಸೆ ಬಳಿಕ ಬಂಧಿಸಲಾಗಿದೆ.
ಪಣಂಬೂರು ಪೊಲೀಸ್ ಠಾಣೆಯ ಚಂದ್ರಹಾಸ, ರಾಧಾಕೃಷ್ಣ, ಸತೀಶ್ ಎಂಬವರಿಗೂ ಚೂರಿ ಇರಿತದಿಂದ ಗಾಯಗಳಾಗಿದೆ. ಮಂಗಳವಾರ ರಾತ್ರಿ 10 ಗಂಟೆ ವೇಳೆಗೆ ಆರೋಪಿಯ ಮನೆಗೆ ತೆರಳಿದ್ದ ಎಸ್‌ಐ ಭಾರತಿ ಮತ್ತು ಪೊಲೀಸರು ಸಲಾಂಗೆ ಶರಣಾಗುವಂತೆ ಸೂಚಿಸಿದ್ದರು. ಗಾಂಜಾ ಮತ್ತಿನಲ್ಲಿ ತೇಲುತ್ತಿದ್ದ ಸಲಾಂ ಬುಲೆಟ್ ಚೂರಿಯನ್ನು ತೆಗೆದು ಎಸ್‌ಐ ಭಾರತಿ ಮೇಲೆ ಬೀಸಿದ್ದಾನೆ. ರಕ್ಷಣೆಗೆ ಬಂದ ಪೊಲೀಸರ ಮೇಲೂ ಚಾಕು ಬೀಸಿದ್ದಾನೆ. ಆರೋಪಿಯ ಕೈಯಿಂದ ಚೂರಿ ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದ ವೇಳೆ ಆತ ಚೂರಿಯಿಂದ ಇರಿದಿದ್ದಾನೆ.
 ಸಲಾಂ ವಿರುದ್ಧ ಮೂಡುಬಿದರೆ, ಪಣಂಬೂರು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ, ಕಳವು, ಹಲ್ಲೆ, ಲೂಟಿ ಪ್ರಕರಣಗಳು ದಾಖಲಾಗಿದೆ. ಒಂದು ಪ್ರಕರಣದಲ್ಲಿ ಶಿಕ್ಷೆಯೂ ಆಗಿದೆ. ಆರೋಪಿ ವಿರುದ್ಧ ಕೋರ್ಟ್ ಬಂಧನ ವಾರಂಟ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಸಲಾಂ ಜೋಕಟ್ಟೆ ಮನೆಯಲ್ಲಿ ಅವಿತಿದ್ದ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ್ದರು.
ಗಾಂಜಾ ಸೇವಿಸುವುದು ಹಣಕ್ಕಾಗಿ ಕಾರ್ಮಿಕರ ಮೇಲೆ ಹಲ್ಲೆ ನಡೆಸುವುದು ಈತನ ವೃತ್ತಿ. ಸದಾ ಚಾಕು ಹಿಡಿದುಕೊಂಡು ಬೆದರಿಸುತ್ತಿದ್ದ ಈ ರೌಡಿ ವಿರುದ್ಧ ಹಲವು ದೂರು ಕೇಳಿ ಬಂದಿತ್ತು.
 ಜೋಕಟ್ಟೆಯಲ್ಲಿ ಎಸ್‌ಇಝಡ್ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಛತ್ತೀಸ್‌ಗಡ್, ಪಶ್ಚಿಮಬಂಗಾಲ ಕಾರ್ಮಿಕರು ವಾಸವಾಗಿದ್ದಾರೆ. ಅವರನ್ನು ಅಟಕಾಯಿಸಿ ದೋಚುವುದೇ ಈತ ವೃತ್ತಿಯಾಗಿ ಮಾಡಿಕೊಂಡಿದ್ದಾನೆ. ಅನೇಕ ಬಾರಿ ಚಾಕು ತೋರಿಸಿ ಬೆದರಿಸಿ ಹಣ ಕಿತ್ತುಕೊಂಡಿದ್ದಾನೆ.  ಪೊಲೀಸರು ಈತನ ಬಂಧನಕ್ಕೆ ಹಲವು ಬಾರಿ ಯತ್ನಿಸಿದಾಗ ಈತ ಅಡ್ಡೆಯನ್ನು ಬದಲಿಸಿಕೊಳ್ಳುತ್ತಿದ್ದ. ಜೋಕಟ್ಟೆ ಮನೆಯಲ್ಲಿ ರಾತ್ರಿ ತಂಗಿದ್ದಾನೆ ಎಂಬ ಖಚಿತ ಮಾಹಿತಿ ಪಡೆದ ಎಸ್‌ಐ ಭಾರತಿ ಮತ್ತು ತಂಡ ದಾಳಿ ನಡೆಸಿದೆ. ಪ್ರತಿ ದಾಳಿ ನಡೆಸಿ ಅಲ್ಲಿಂದ ಪಾರಾಗಲು ಸಲಾಂ ಯತ್ನಿಸಿ ಸೋತು ಸೆರೆ ಸಿಕ್ಕಿದ್ದಾನೆ.
 ಆರೋಪಿ ಸಲಾಂ ವಿರುದ್ಧ ಪೊಲೀಸರ ಕರ್ತವ್ಯಕ್ಕೆ ಭಂಗ, ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement