ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಎಸ್ಸೆಸೆಲ್ಸಿ ಶಿಕ್ಷಕರಿಗೂ ಬಂತು ಪರೀಕ್ಷಾ ಕಾಲ! ಫೇಲ್ ಆದ್ರೆ ಎತ್ತಂಗಡಿ!!

Rashmi Kasaragodu
Updated On : 27 Jun 2014, 12:49 pm

ಮಂಗಳೂರು: ಇನ್ನು ಎಸ್ಸೆಸ್ಸೆಲ್ಸಿ ಶಿಕ್ಷಕರ ಮೌಲ್ಯಮಾಪನ ಸರದಿ, ಅನುತ್ತೀರ್ಣ ಶಿಕ್ಷಕರಿಗೆ ಎತ್ತಂಗಡಿ ಶಿಕ್ಷೆ ಗ್ಯಾರಂಟಿ!
 ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಶತಾಯಗತಾಯ ಪ್ರಯತ್ನವಾಗಿ ಇಂಥದೊಂದು ಯೋಜನೆ ದ.ಕ. ಜಿಲ್ಲೆಯ ಸರ್ವ ಶಿಕ್ಷಣ ಅಭಿಯಾನ ಇಲಾಖೆ ರೂಪಿಸಿದೆ. 5 ವರ್ಷದಲ್ಲಿ ಕಳಪೆ ಫಲಿತಾಂಶ ನೀಡಿದ ಎಸ್‌ಎಸ್‌ಎಲ್‌ಸಿ ಶಾಲೆಯ ಆಯಾ ವಿಷಯಗಳ ಶಿಕ್ಷಕರನ್ನು ಹತ್ತಿರದ ಬೇರೆ ಶಾಲೆಗಳಿಗೆ ವರ್ಗಾಯಿಸುವ ಯೋಜನೆ ರೂಪಿಸಿದೆ. ಇದಕ್ಕೆ ಜು. 15 ರಿಂದ ಚಾಲನೆ ದೊರಕಲಿದೆ.
 ಇನ್ನು ಮುಂದೆ ಶಿಕ್ಷಕರು ಶಾಲೆಯಲ್ಲಿ ಮಕ್ಕಳಿಲ್ಲ ಎಂಬ ಕಾರಣಕ್ಕೆ ತಮಗೆ ಬೇಕಾದಂತೆ ಪಾಠ ಮಾಡಿ ಮನೆಗೆ ಹೋಗುವಂತಿಲ್ಲ. ಮಕ್ಕಳನ್ನು ಗದರಿಸದೆ ತಿದ್ದಲು ಸಾಧ್ಯವಿಲ್ಲ ಎಂಬ ಸಬೂಬು ನೀಡುವಂತಿಲ್ಲ. ತಮ್ಮ ಪಾಠದಲ್ಲಿ ಮಕ್ಕಳು ಕಡಿಮೆ ಅಂಕ ಗಳಿಸಿದ್ದರೆ ಅಂಥ ವಿಷಯವಾರು ಶಿಕ್ಷಕರಿಗೆ ಬೇರೆ ಶಾಲೆಗೆ ಎತ್ತಂಗಡಿ ಶಿಕ್ಷೆ ಗ್ಯಾರಂಟಿ.
ಹೇಗೆ ಮೌಲ್ಯಮಾಪನ ಮಾಡುತ್ತಾರೆ?: ಇದಕ್ಕಾಗಿ ಜಿಲ್ಲೆಯ 162 ಶಾಲೆಗಳ ಎಸ್‌ಎಸ್‌ಎಲ್‌ಸಿ ಶಿಕ್ಷಕರ 5 ವರ್ಷದ ಶಿಕ್ಷಣ ಸೇವೆಯ ಗುಣಮಟ್ಟವನ್ನು ಪರಿಶೀಲಿಸಲಾಗುವುದು. ಪ್ರತಿಯೊಂದು ವಿಷಯವಾರು ಶಿಕ್ಷಕರು ಮಕ್ಕಳಿಗೆ ಮಾಡುತ್ತಿರುವ ಪಾಠದ ಕ್ರಮ, ಮಕ್ಕಳು ಪಡೆದುಕೊಂಡ ಅಂಕ, ಮಕ್ಕಳಲ್ಲಿರುವ ಜ್ಞಾನದ ಮಟ್ಟ ಇವುಗಳೆಲ್ಲವನ್ನೂ ಮೌಲ್ಯಮಾಪನ ಮಾಡಲಾಗುತ್ತದೆ.
ದ.ಕ. ಜಿಲ್ಲೆಯಲ್ಲಿ ಸುಮಾರು 3.29 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಶಿಕ್ಷಣದ ಗುಣಮಟ್ಟ ಕೆಳದರ್ಜೆಗಿಳಿಯಲು ಶಿಕ್ಷಕರ ಕೊರತೆ ಕಾರಣವಲ್ಲ. ಇದಕ್ಕೆ ಶಿಕ್ಷಕರ ಇಚ್ಛಾಶಕ್ತಿ ಕಾರಣ. ಪ್ರತಿಯೊಬ್ಬ ಮಗು ಉತ್ತಮ ವಿದ್ಯಾರ್ಥಿಯಾಗಿ ರೂಪಿಸುವುದು ಶಿಕ್ಷಕನ ಕರ್ತವ್ಯ ಎನ್ನುವುದು ಶಿಕ್ಷಣ ಇಲಾಖೆಯ ವಾದ.
ಕಾರ್ಯಕ್ರಮ, ಸಭೆ  ರದ್ದು: ಕ್ಲಸ್ಟರ್‌ಮಟ್ಟದಲ್ಲಿ ಪ್ರತಿ 15 ಶಾಲೆಗಳಿಗೆ ಗುಚ್ಛ ಸಂಪನ್ಮೂಲ ವ್ಯಕ್ತಿ(ಸಿಆರ್‌ಪಿ)ಗಳು ನಡೆಸುವ ವಿದ್ಯಾರ್ಥಿ ವೇತನ, ಬಹುಮಾನ, ರೋಟರಿ ಕಾರ್ಯಕ್ರಮಗಳಿಗೆ ಶಿಕ್ಷಕರು ಪಾಲ್ಗೊಳ್ಳುತ್ತಿದ್ದರು. ಇನ್ನು ಮುಂದೆ ಇಂಥ ಕಾರ್ಯಕ್ರಮಗಳಿಗೆ ಶಿಕ್ಷಕರ ಪಾಲ್ಗೊಳ್ಳುವಿಕೆ ರದ್ದು. ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ವಿಚಾರಗಳನ್ನು ಶಾಲೆಯ ಮುಖ್ಯಶಿಕ್ಷಕರಿಗೆ ದೂರವಾಣಿ ಮೂಲಕ ತಿಳಿಸಲು ಸಿಆರ್‌ಪಿಗಳಿಗೆ ಸೂಚಿಸಲಾಗುತ್ತದೆ. ಶಿಕ್ಷಣ, ಕ್ರೀಡಾ ಇಲಾಖೆಗೆ ಸಂಬಂಧಪಟ್ಟ ಸಭೆಗಳನ್ನು ಶನಿವಾರ ಮಧ್ಯಾಹ್ನ ನಂತರ ನಡೆಸಲು ತೀರ್ಮಾನಿಸಲಾಗಿದೆ. ಇದರಿಂದ ಶಿಕ್ಷಕರು ಮಕ್ಕಳೊಂದಿಗೆ ಹೆಚಕಾಲ ಕಳೆಯಲು ಅವಕಾಶ ಲಭಿಸುತ್ತದೆ.
ಸರ್ಕಾರಿ ಶಾಲೆಗಳಿಗೆ ಗ್ರೇಡ್: ಜಿಲ್ಲೆಯ ಪ್ರತಿ ಶಾಲೆಗಳ ಶಿಕ್ಷಣ, ಮೂಲಸೌಕರ್ಯ, ಉತ್ತಮ ತಂಡವನ್ನು ಪರಿಗಣಿಸಿ ಎ ಗ್ರೇಡ್ ನೀಡಲಾಗುತ್ತದೆ. ಇಂಥ ಶಾಲೆಗಳಲ್ಲಿ ವಿದ್ಯಾರ್ಥಿಗಳಲ್ಲಿನ ಶಿಕ್ಷಣ ಗುಣಮಟ್ಟ ಉತ್ತಮವಾಗಿರುತ್ತದೆ. ಬಿ ಮತ್ತು ಸಿ ಗ್ರೇಡ್ ಶಾಲೆಗಳನ್ನು ಪಟ್ಟಿ ಮಾಡಿ ಅಂಥ ಶಾಲೆಗಳನ್ನು ಒಂದು ವರ್ಷದಲ್ಲಿ ಅಭಿವೃದ್ಧಿಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.  ಜೂ. 30 ರೊಳಗೆ ಎಲ್ಲ ಮಾನದಂಡಗಳನ್ನು ಸಿದ್ಧಪಡಿಸಿ ಆಯಾ ಶಾಲೆಗಳಿಗೆ ನೋಟೀಸ್ ಕಳುಹಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.


ಈಗಾಗಲೇ ಶೇ. 60 ಕ್ಕಿಂತ ಕಡಿಮೆ ಫಲಿತಾಂಶ ಗಳಿಸಿರುವ ಶಾಲೆಗಳ ಶಿಕ್ಷಕರ ಸಭೆ ಕರೆಯಲಾಗಿದೆ. ಶಿಕ್ಷಕರು ಹೆಚ್ಚಾಗಿ ಮಕ್ಕಳೊಂದಿಗೆ ತಮ್ಮ ಪಾಠ-ಪ್ರವಚನ ಮಾಡುವಂತೆ ಅವಕಾಶ ಕಲ್ಪಿಸಿ, ಉತ್ತಮ ಫಲಿತಾಂಶ ನಿರೀಕ್ಷಿಸಲಾಗುತ್ತಿದೆ. ಯೋಜನೆ ರೂಪುರೇಷೆಯನ್ನು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿದ್ದು, ಒಪ್ಪಿಗೆ ಸೂಚಿಸಿದ್ದಾರೆ.
     

 ಇಲಾಖೆ ಹೇಳುವುದೇನು?

ದ.ಕ. ಜಿಲ್ಲೆಯಲ್ಲಿ ಸುಮಾರು 3.29 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಶಿಕ್ಷಣದ ಗುಣಮಟ್ಟ ಕೆಳದರ್ಜೆಗಿಳಿಯಲು ಶಿಕ್ಷಕರ ಕೊರತೆ ಕಾರಣವಲ್ಲ. ಇದಕ್ಕೆ ಶಿಕ್ಷಕರ ಇಚ್ಛಾಶಕ್ತಿ ಕಾರಣ. ಪ್ರತಿಯೊಬ್ಬ ಮಗು ಉತ್ತಮ ವಿದ್ಯಾರ್ಥಿಯಾಗಿ ರೂಪಿಸುವುದು ಶಿಕ್ಷಕನ ಕರ್ತವ್ಯ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement