ಪೈಪ್ಲೇನ್ ಸರ್ವೆ ಅಧಿಕಾರಿಗಳಿಗೆ ತಡೆ
ಬೆಳ್ತಂಗಡಿ: ಕೆಲ ದಿನಗಳ ಹಿಂದೆ ಪಿಜಕ್ಕಳದಲ್ಲಿ ಗ್ಯಾಸ್ ಪೈಪ್ಲೈನ್ ಪಂಪ್ ಹೌಸಾಗಿ ಗುರುತಿಸಲಾದ ಜಾಗದ ಸರ್ವೆಗಾಗಿ ತೆರಳಿದ್ದ ಸರ್ವೆ ಅಧಿಕಾರಿಗಳನ್ನು ಸ್ಥಳೀಯರು ತಡೆದ ಬಗ್ಗೆ ಗುರುವಾರ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಲ್ಲಿನ ಸಂತ್ರಸ್ತರೊಂದಿಗೆ ಪೊಲೀಸರು ಸಮಾಲೋಚನೆ ಸಭೆ ನಡೆಸಿದರು.
ಈ ಸಂದರ್ಭ ಸಂತ್ರಸ್ತರೊಂದಿಗೆ ಮಾತನಾಡಿದ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ, ಜನರು ಅಧಿಕಾರಿಗಳನ್ನು ತಡೆದು ಕಾನೂನನ್ನು ಕೈಗೆತ್ತಿಕೊಳ್ಳುವ ಕಾರ್ಯ ಮಾಡಿದರೆ ಪೊಲೀಸ್ ಇಲಾಖೆಗೆ ಕ್ರಮ ಕೈಗೊಳ್ಳುವ ಅನಿವಾರ್ಯತೆ ಎದುರಾಗಲಿದೆ ಎಂದರು.
ನಾವು ಕಾನೂನು ಕೈಗೆತ್ತಿಕೊಳ್ಳುವುದಲ್ಲ. ಅಧಿಕಾರಿಗಳು ಯಾವುದೇ ನೋಟಿಸ್ ನೀಡದೆ, ಮಾಹಿತಿ ನೀಡದೇ ಏಕಾಏಕಿ ನಮ್ಮ ಜಮೀನುಗೆ ನುಗ್ಗಿದ್ದಾರೆ.ಇನ್ನು ಪರಿಹಾರದ ವಿಚಾರ ಹೇಳಿಕೊಂಡು ನಮ್ಮಲ್ಲಿಗೆ ಬರುವುದು ಬೇಡ ಎಂದು ಸಂತ್ರಸ್ತರು ವಿನಂತಿಸಿಕೊಂಡರು. ಡಿಎಸ್ಎಸ್ ಅಂಬೇಡ್ಕರ್ ವಾದ ಜಿಲ್ಲಾ ಸಂಚಾಲಕ ಚಂದು ಎಲ್., ಪುದುವೆಟ್ಟು ಗ್ರಾ.ಪಂ. ಸದಸ್ಯ ರೋಯ್, ಸಂತ್ರಸ್ತರಾದ ವೆಂಕಪ್ಪ, ರಮೇಶ್, ಮನೋಜ್, ಹಂಸ ಕೆ.ಎಂ., ಶಾರದ, ನೋಣಮ್ಮ ಇದ್ದರು.