ಬೀಡಿನಗುಡ್ಡೆ ಸಮಸ್ಯೆ ಅಲೆವೂರಿಗೆ!
ಸುಭಾಶ್ಚಂದ್ರ ವಾಗ್ಳೆ
ಮಣಿಪಾಲ: ಸುಮಾರು 20 ವರ್ಷಗಳ ಕಾಲ ಉಡುಪಿ ನಗರದ ಬೀಡಿನಗುಡ್ಡೆ ವಾರ್ಡ್‌ನ ಜನರು ಅನುಭವಿಸಿದ್ದ ಧೂಳು, ಕೊಳಕು ನೀರು, ದುರ್ವಾಸನೆ, ಸೊಳ್ಳೆ, ಸಾಂಕ್ರಮಿಕ ಕಾಯಿಲೆ... ಇತ್ಯಾದಿ ಶಾಪಗಳನ್ನು ಈಗ ಅಲೆವೂರು ಗ್ರಾಮ ಪಂಚಾಯಿತಿಯ ಪ್ರಗತಿನಗರ- ಮಂಚಿ ಗ್ರಾಮಗಳ ಜನರು ಕಳೆದ 5 ವರ್ಷಗಳಿಂದ ಅನುಭವಿಸುತ್ತಿದ್ದಾರೆ.
ಉಡುಪಿ ನಗರಸಭೆಯ 35 ವಾರ್ಡ್‌ಗಳಲ್ಲಿ ದಿನವೊಂದಕ್ಕೆ ಉತ್ಪತ್ತಿಯಾಗುವ 28- 30 ಲೋಡು ಗೃಹ ತ್ಯಾಜ್ಯ, ಮಾರುಕಟ್ಟೆ, ಅಂಗಡಿ- ಹೊಟೇಲು ಕಸವನ್ನು ನಗರದ ಹೊರಭಾಗದ ಬೀಡಿನಗುಡ್ಡೆಯಲ್ಲಿ ಸಂಗ್ರಹಿಸಲಾಗುತ್ತಿತ್ತು. 20 ವರ್ಷಗಳಲ್ಲಿ ಉಡುಪಿಗೆ ಕಳಂಕವಾಗುವಂತೆ ಅದು ಪರ್ವತಾಕಾರವಾಗಿ ಬೆಳೆದಿತ್ತು. 5 ವರ್ಷಗಳ ಹಿಂದೆ ಅದನ್ನು ಅಲ್ಲಿಂದ ಅಲೆವೂರು ಗ್ರಾ.ಪಂ.ನ ಪ್ರಗತಿ ನಗರಕ್ಕೆ ಸ್ಥಳಾಂತರಿಸಲಾಯಿತು. ಜೊತೆಗೆ ಬೀಡಿನಗುಡ್ಡೆ ವಾರ್ಡ್‌ನ ನಿವಾಸಿಗಳು ಅನುಭವಿಸಿದ್ದ ನರಕಯಾತನೆ ಕೂಡ ಪ್ರಗತಿನಗರ - ಮಂಚಿ ಗ್ರಾಮದ ಜನತೆಗೆ ಹಸ್ತಾಂತರವಾಯಿತು.
ರು. 7 ಕೋಟಿ ಖರ್ಚು: ಆರಂಭದಲ್ಲಿ ಪ್ರಗತಿನಗರದ ಈ ಯೋಜನೆಯನ್ನು ತ್ಯಾಜ್ಯ ಸಂಸ್ಕರಣಾ ಘಟಕ, ಇದರಿಂದ ಆರೋಗ್ಯ, ಪರಿಸರ, ನೀರು, ಜನಜೀವನದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂದು ಸ್ಥಳೀಯ ಜನರನ್ನು ನಂಬಿಸಲಾಗಿತ್ತು. 22 ಎಕ್ರೆ ವಿಸ್ತೀರ್ಣದ ಈ ಯೋಜನೆಗೆ ರು. 7 ಕೋಟಿ ಖರ್ಚು ಮಾಡಲಾಗಿದೆ.
ಸಂಸ್ಕರಣೆಗಾಗಿ 4 ಶೆಡ್‌ಗಳನ್ನು ನಿರ್ಮಿಸಲಾಗಿದೆ. ಇದನ್ನೆಲ್ಲಾ ಅಧ್ಯಯನ ಮಾಡುವುದಕ್ಕಾಗಿಯೇ ಅಂದಿನ ಶಾಸಕ ರಘುಪತಿ ಭಟ್, ನಗರಸಭೆ - ಜಿ.ಪಂ. ಸದಸ್ಯರು ಪುಣೆಗೆ ಹೋಗಿ ಪ್ರವಾಸ ಮಾಡಿ ಬಂದಿದ್ದರು.
ಸಿಬ್ಬಂದಿಯೂ ಇಲ್ಲ, ಸಂಸ್ಕರಣೆಯೂ ಇಲ್ಲ: ಪ್ರಗತಿ ನಗರದ ಯೋಜನೆಯಂತೆ ತ್ಯಾಜ್ಯವನ್ನು ವಿಂಗಡಿಸುವ, ಸಂಸ್ಕರಿಸುವ ಯಂತ್ರೋಪಕರಣಗಳು, ಅದಕ್ಕೆ ಅಗತ್ಯ ತಜ್ಞ ಸಿಬ್ಬಂದಿಯನ್ನು ನೇಮಿಸಬೇಕಾಗಿತ್ತು. ಆದರೆ, ಈಗ ಅಲ್ಲಿ ಯಂತ್ರೋಪಕರಣಗಳೂ ಇಲ್ಲ, ಸಿಬ್ಬಂದಿಯೂ ಇಲ್ಲ, ಸಂಸ್ಕರಣೆಯೂ ಇಲ್ಲ...
ಹಾಗಿದ್ದರೆ ರು. 7 ಕೋಟಿ ಏನಾಯಿತು ಎಂಬುದು ಅದು ಯಾರಿಗೂ ಗೊತ್ತಿಲ್ಲ.
ಪ್ರಸ್ತುತ ಶೆಡ್‌ಗಳಲ್ಲಿ ನಿತ್ಯ 25 - 30 ಲಾರಿಗಳಲ್ಲಿ ಕಸವನ್ನು ತಂದು ಸುರಿಯಲಾಗುತ್ತಿದೆ. ಅದು ರಾಶಿ ಬಿದ್ದು ಕೊಳೆತು ದುರ್ನಾತ ಬೀರುತ್ತಿದೆ. ಅದನ್ನು ಯಾವುದೇ ರೀತಿಯ ಸಂಸ್ಕರಣೆಗೊಳಪಡಿಸದೇ ಬಾಡಿಗೆಯ ಜೆಸಿಬಿ (ಇದಕ್ಕೆ 5 ವರ್ಷಗಳಿಂದ ನಗರಸಭೆಯ ಬೊಕ್ಕಸದಿಂದ ತಿಂಗಳಿಗೆ ಲಕ್ಷಾಂತರ ರು. ಬಾಡಿಗೆ ಪಾವತಿಸಲಾಗುತ್ತಿದೆ) ಯಿಂದ ಪಕ್ಕದ ಗುಂಡಿಗಳಿಗೆ ತುಂಬಿಸಲಾಗುತ್ತದೆ.
ನದಿಗೆ ಕೊಳಚೆ ನೀರು
ಈ ಗುಂಡಿಯಿಂದ ಹೊರಗೆ ಬರುವ ಕೊಳಕು ನೀರನ್ನು ಅಲೆವೂರು ನದಿಗೆ ಬಿಡಲಾಗುತ್ತಿತ್ತು. ಇದರಿಂದ ನದಿಯೇ ಕೊಳೆತು ಹೋಗಿತ್ತು. ಊರವರು ಸಿಟ್ಟಿನಿಂದ ಪೈಪ್ ನಾಶ ಮಾಡಿದ್ದಾರೆ. ಈಗ ಈ ಅಸಾಧ್ಯ ಕೊಳಕು ನೀರು ಮಂಚಿ, ಕರ್ವಾಲು ಗ್ರಾಮದ ತೋಟಗಳಿಗೆ, ಕುಡಿಯುವ ನೀರಿನ ಬಾವಿಗಳಿಗೆ ಹರಿದು ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಈ ಜನರು ಗೋಳು ಕೇಳುವವರೇ ಇಲ್ಲ. ಈ ಜನರು ಉಸ್ತುವಾರಿ ಸಚಿವ ಸೊರಕೆ ಅವರಿಗೆ ಮನವಿ ಮಾಡಿದ್ದಾರೆ. ಮುಂದೆನಾಗುತ್ತದೆ ಕಾದು ನೋಡಬೇಕಾಗಿದೆ.
ಇದು ಸಚಿವರ ಕ್ಷೇತ್ರ
ಅಲೆವೂರು ಗ್ರಾ.ಪಂ. ಕಾಪು ವಿಧಾನಸಭಾ ಕ್ಷೇತ್ರದೊಳಗಿದೆ. ಇಲ್ಲಿನ ಶಾಸಕ ವಿನಯಕುಮಾರ್ ಸೊರಕೆ ಅವರೇ ಜಿಲ್ಲಾ ಉಸ್ತುವಾರಿ, ಮಾತ್ರವಲ್ಲ ನಗರಾಭಿವೃದ್ಧಿ ಸಚಿವರೂ ಹೌದು. ಉಡುಪಿ ನಗರದ ಅಭಿವೃದ್ಧಿಗೆ ಗ್ರಾ.ಪಂ.ನ ಜನರನ್ನು ಬಲಿ ನೀಡುವುದು ಎಷ್ಟು ಸರಿ ಎಂದು ಈ ಜನರು ಕೇಳುತ್ತಿದ್ದಾರೆ. ಇತ್ತೀಚೆಗೆ ಸಚಿವರು ಈ ಸಮಸ್ಯೆ ಪರಿಹಾರ ಮಾಡುವುದಾಗಿ ಭರವಸೆಯೇನೋ ನೀಡಿದ್ದಾರೆ. ಆದರೆ, ಯಾವಾಗ?
ತೊಂದರೆಯಾಗದಿರಲಿ
ಹಿಂದಿನ ಸರ್ಕಾರದ ಅವಧಿಯಲ್ಲಿ ರು. 7 ಕೋಟಿ ಖರ್ಚು ಮಾಡಲಾಗಿದೆ. ಅದೇನಾಗಿದೆ ಗೊತ್ತಿಲ್ಲ. ಈಗ ಮತ್ತೇ ಈ ಸಮಸ್ಯೆ ಪರಿಹಾರಕ್ಕೆ ಸಲಹೆಗಾರರನ್ನು ನೇಮಿಸಲಿಕ್ಕೆ ನಗರಸಭೆ ಟೆಂಡರು ಕರೆದಿದೆ. ಅನಗತ್ಯವಾದ ಖರ್ಚುಗಳನ್ನು ಮಾಡದೇ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಣೆಗೊಳಿಸಬೇಕು ಮತ್ತು ಊರಿನ ಜನರ ಆರೋಗ್ಯ, ಪರಿಸರಕ್ಕೆ ತೊಂದರೆಯಾಗದಂತೆ ಘಟಕವನ್ನು ನಿರ್ವಹಿಸಬೇಕು.
ಟಿ ಹರೀಶ್ ಕಿಣಿ, ಮಾಜಿ ಅಧ್ಯಕ್ಷ, ಅಲೆವೂರು ಗ್ರಾ.ಪಂ.