ಸ್ವಯಂ ಚಾಲಿತ ವಿಪತ್ತು ನಿರ್ವಹಣೆ ಯೋಜನೆ ಮಾಹಿತಿ ನೀಡಲು 30 ಗಡುವು
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಸ್ವಯಂಚಾಲಿತ ವಿಪತ್ತು ನಿರ್ವಹಣೆ ಯೋಜನೆಗೆ ಪ್ರತಿ ಇಲಾಖೆ ಜೂ.30ರೊಳಗೆ ಮಾಹಿತಿ ನೀಡುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಾಕೀತು ಮಾಡಿದ್ದಾರೆ. ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಪತ್ತು ನಿರ್ವಹಣೆಗೆ ನೆರವಾಗಲು ಎಲ್ಲ ಇಲಾಖೆಗಳು ನೋಡೆಲ್ ಅಧಿಕಾರಿ ನೇಮಿಸುವಂತೆ ಕಳೆದ ಜನವರಿಯಲ್ಲೇ ಸೂಚಿಸಲಾಗಿತ್ತು. ಆದರೂ ಪಾಲನೆಯಾಗದ ಬಗ್ಗೆ ಸಿಇಒ ತುಳಸಿ ಮದ್ದಿನೇನಿ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿ ಇಲಾಖೆ ವಿಪತ್ತು ನಿರ್ವಹಣೆಗೆ ಕೈಗೊಂಡಿರುವ ಕ್ರಮ ಹಾಗೂ ಲಭ್ಯವಿರುವ ಸೌಲಭ್ಯಗಳ ಮಾಹಿತಿಯನ್ನು ಆನ್‌ಲೈನ್‌ಗೆ ಕೂಡಲೇ ಅಪ್‌ಲೋಡ್ ಮಾಡಬೇಕು. ಯಾವುದೇ ಸಂದರ್ಭ ತೊಂದರೆ ಎದುರಾದಾಗ ತಕ್ಷಣ ಮಾಹಿತಿ ಸಿಗುವಂತಾಗಬೇಕು ಎಂದರು. ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ತಡೆಗೆ ವಿವಿಧ ಇಲಾಖೆ ಅಧಿಕಾರಿಗಳು ಕೈಗೊಂಡ ಮುಂಜಾಗ್ರತೆ ಕ್ರಮದ ಬಗ್ಗೆ ತಿಳಿದುಕೊಂಡರು. ಶಿಥಿಲಗೊಂಡ ಸ್ಥಿತಿಯಲ್ಲಿರುವ ಸೇತುವೆಗಳ ತಪಾಸಣೆ ಹಾಗೂ ದುರಸ್ತಿಪಡಿಸಬೇಕು. ಅವಶ್ಯವಿರುವಲ್ಲಿ ಗಂಜಿ ಕೇಂದ್ರ, ಆರೋಗ್ಯ ಇಲಾಖೆ, ಅಗ್ನಿಶಾಮಕದಳ ಸಿದ್ಧತೆ ಬಗ್ಗೆ ಮಾಹಿತಿ ಪಡೆದರು. ಅಗ್ನಿಶಾಮಕದಳ ಮುಖ್ಯ ಅಧಿಕಾರಿ ವರದರಾಜನ್ ಮಾತನಾಡಿ, ರೇಲ್ವೆಯಲ್ಲಿ ಅವಘಡ ಸಂಭವಿಸಿದರೆ ಯಾವುದೇ ಪೂರ್ವ ಸಿದ್ಧತೆ ಇರುವುದಿಲ್ಲ ಎಂದು ಹೇಳಿದರು.