ಅನುಪಯುಕ್ತ ಕೊಳವೆ ಬಾವಿ ಮುಚ್ಚುವ ಅಭಿಯಾನ
ಪುತ್ತೂರು: ಅನುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚುವ ಅಭಿಯಾನ ಹಾಗೂ ಈ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಗುರುವಾರ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮ ಪಂಚಾಯಿತಿಯಲ್ಲಿ ನಡೆಯಿತು. ಕೊಳ್ತಿಗೆ ಗ್ರಾಪಂ ನೇತೃತ್ವದಲ್ಲಿ ವಿವಿಧ ಸಂಘಸಂಸ್ಥೆ, ಶಾಲೆ, ಕಾಲೇಜ್‌ಗಳ ಸಹಕಾರದಲ್ಲಿ ಅನುಪಯುಕ್ತ ಕೊಳವೆ ಬಾವಿ ಮುಚ್ಚುವ ಅಭಿಯಾನ ನಡೆಯಿತು. ಅಭಿಯಾನದಲ್ಲಿ ಕೊಳ್ತಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 8 ಅನುಪಯುಕ್ತ ಕೊಳವೆ ಬಾವಿಗಳನ್ನು ಪತ್ತೆಹಚ್ಚಲಾಗಿದೆ. ಈ ಪೈಕಿ ಕುಂಡಡ್ಕ, ಕೊಂರ್ಬಡ್ಕ, ಮೂಲೆತ್ತೋಡಿ, ಅಡ್ಕರ್‌ಗುಂಡಿ ಮೊದಲಾದೆಡೆ 6 ಕೊಳವೆ ಬಾವಿಗಳಿದ್ದು ಮುಚ್ಚಳ ಹಾಕಲಾಗಿದೆ. ಆದರೆ ಪೆರ್ಲಂಪಾಡಿ ಸಿಆರ್‌ಸಿ ಕಾಲೋನಿ ಪಟ್ಟ ಹಾಗೂ ಕುಂಟಿಕಾನ ಶಾಲೆ ಬಳಿ ಇರುವ ಅನುಪಯುಕ್ತ ಕೊಳವೆ ಬಾವಿಗಳು ಯಾವುದೇ ಮುಚ್ಚಳವಿಲ್ಲದೆ ಅಪಾಯಕಾರಿ ಸ್ಥಿತಿಯಲ್ಲಿರುವುದನ್ನು ಗುರುತಿಸಲಾಯಿತು. ಕುಂಟಿಕಾನ ಶಾಲೆ ಬಳಿಯಿರುವ ಕೊಳವೆ ಬಾವಿ 500 ಅಡಿ ಆಳವಿದ್ದು, ಇದೀಗ ಅನುಪಯುಕ್ತವಾಗಿದೆ. ಬಾಯ್ದೆರೆದಿದ್ದ ಎರಡು ಕೊಳವೆ ಬಾವಿಗಳನ್ನು ಮಣ್ಣು ತುಂಬಿಸಿ ಮುಚ್ಚಲಾಯಿತು. ಉಳಿದವುಗಳನ್ನು ಶುಕ್ರವಾರ ನಡೆಯುವ ಅಭಿಯಾನದಲ್ಲಿ ಮುಚ್ಚಲಾಗುವುದು ಎಂದು ಗ್ರಾಪಂ ತಿಳಿಸಿದೆ.