ಗೋಹತ್ಯೆ ನಿಷೇಧ, ಬಾಂಗ್ಲಾ ನುಸುಳುವಿಕೆ ತಡೆ ನಿರ್ಣಯ
ಮಂಗಳೂರು: ಗೋಹತ್ಯೆ ಪೂರ್ಣ ನಿಷೇಧ, ಬಾಂಗ್ಲಾ ನುಸುಳುವಿಕೆಗೆ ತಡೆ, ವಿಶ್ವದಾದ್ಯಂತ ಹಿಂದೂಗಳಿಗೆ ಭದ್ರತೆ ನೀಡಬೇಕು, ನೇಪಾಳದಲ್ಲಿ ಹಿಂದೂ ರಾಷ್ಟ್ರ ಪುನರ್ ಸ್ಥಾಪನೆಗೆ ಗೋವಾದಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಶ್ರಯದಲ್ಲಿ ಗುರುವಾರ ಮುಕ್ತಾಯವಾದ ಅಖಿಲ ಭಾರತೀಯ ಹಿಂದೂ ಅಧಿವೇಶನ ನಿರ್ಣಯ ಕೈಗೊಂಡಿದೆ.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ದೇಶಕ್ಕೆ ಅನ್ವಯವಾಗುವಂತೆ ಗೋಹತ್ಯೆ ನಿಷೇಧ ಜಾರಿಗೆ ತರಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ದೇಶದ ಎಲ್ಲ ನಾಗರಿಕರಿಗೆ ಸಮಾನ ಅಧಿಕಾರ ನೀಡುವ ಸಮಾನ ನಾಗರಿಕ ಕಾನೂನು ಜಾರಿಯಾಗಬೇಕು.
ಮತಾಂತರ ನಿಷೇಧ ಜಾರಿಗೆ ತರಬೇಕು. ಭಾರತದಲ್ಲಿರುವ 5 ಕೋಟಿ ಬಾಂಗ್ಲಾ ನುಸುಳುಕೋರರನ್ನು ಹಿಂದಕ್ಕೆ ಕಳುಹಿಸಬೇಕು. ಬಾಂಗ್ಲಾ ಮತ್ತು ಪಾಕಿಸ್ತಾನಿ ಸಂತ್ರಸ್ತ ಹಿಂದೂಗಳಿಗೆ ಭಾರತದ ಪೌರತ್ವ ನೀಡಲು ಕಾನೂನು ರೂಪಿಸಬೇಕು. ಬಾಂಗ್ಲಾ ನುಸುಳುಕೋರರಿಗೆ ಆಶ್ರಯ ನೀಡುವವರಿಗೆ ಕಠಿಣ ಶಿಕ್ಷೆ ನೀಡಬೇಕು.
ಬಾಂಗ್ಲಾ ದೇಶೀಯರನ್ನು ವಾಪಾಸ್ ಕಳುಹಿಸುವ ಅಭಿಯಾನಕ್ಕೆ ಚಾಲನೆ ನೀಡಲು ನಿರ್ಣಯಿಸಲಾಯಿತು. ಹಿಂದೂ ರಾಷ್ಟ್ರ ಸ್ಥಾಪನೆಗೆ 20 ರಾಜ್ಯಗಳ 80 ಸ್ಥಳಗಳಲ್ಲಿ ಪ್ರಾಂತೀಯ ಹಿಂದೂ ಅಧಿವೇಶನ ಹಾಗೂ ನೂರು ಸ್ಥಳಗಳಲ್ಲಿ ಬಹಿರಂಗ ಹಿಂದೂ ಧರ್ಮಜಾಗೃತಿ ಸಭೆ ಆಯೋಜಿಸಲು ನಿರ್ಧರಿಸಲಾಯಿತು.
ಪ್ರಕೃತಿ ವಿಕೋಪ ಹಾಗೂ ಮಾನವ ವಿಪತ್ತು ಸಂದರ್ಭ ಎಲ್ಲ ಸಂಘಟನೆಗಳು ಒಟ್ಟಾಗಿ ಆಪತ್ಕಾಲದಲ್ಲಿ ಹಿಂದೂಗಳಿಗೆ ಸಹಾಯ ಮಾಡುವುದು. ಹಿಂದೂ ಸಬಲೀಕರಣಕ್ಕೆ ದೇಶಾದ್ಯಂತ ಸ್ವರಕ್ಷಣಾ ತರಬೇತಿ ವರ್ಗ ನಡೆಸಲು ತೀರ್ಮಾನಿಸಲಾಯಿತು.
ಹಿಂದೂ ಜನಜಾಗೃತಿ ಸಮಿತಿ ರಾಷ್ಟ್ರೀಯ ಮಾರ್ಗದರ್ಶಕ ಡಾ.ಚಾರುದತ್ತ ಪಿಂಗಳೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೇಪಾಳ ರಾಷ್ಟ್ರೀಯ ಧರ್ಮಸಭೆ ಅಧ್ಯಕ್ಷ ಮಾಧವ ಭಟ್ಟಾರಾಯ, ಸಮಿತಿ ರಾಷ್ಟ್ರೀಯ ವಕ್ತಾರ ರಮೇಶ್ ಶಿಂದೆ, ಭಾರತ ರಕ್ಷಾ ಮಂಚ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಿಲ ಧೀರ, ಹಿಂದೂ ವಿಧಿಜ್ಞ ಪರಿಷತ್ತು ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಂಕರ ಇದ್ದರು.