ಸ್ವಚ್ಛತೆ ಆದ್ಯತೆ ಇದ್ದರೂ ತ್ಯಾಜ್ಯ ಸಮಸ್ಯೆ
ಬೆಳ್ತಂಗಡಿ: ಜನಸಂಖ್ಯೆ ಹೆಚ್ಚಾದಂತೆ ತ್ಯಾಜ್ಯ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಮಹಾನಗರಗಳಲ್ಲಿ ಮಾತ್ರ ಕಂಡು ಬರುತ್ತಿದ್ದ ಸಮಸ್ಯೆ ಇದೀಗ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸುತ್ತಿದ್ದು, ತ್ಯಾಜ್ಯ ವಿಲೇವಾರಿಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶಗಳೇ ಹೆಚ್ಚಾಗಿರುವುದರಿಂದ ಕಸದ ವಿಲೇವಾರಿ ತೊಂದರೆ ಅಷ್ಟಾಗಿ ಕಂಡು ಬಂದಿಲ್ಲ. ಆದರೆ ಬೆಳ್ತಂಗಡಿ ಪಟ್ಟಣ ಮತ್ತು ಉಜಿರೆ ಪೇಟೆಯಲ್ಲಿ ಮಾತ್ರ ಪ್ರತಿದಿನ ಎಂಬಂತೆ ಕಸ ಸಂಗ್ರಹಿಸಿ ಸ್ವಚ್ಛ ಮಾಡಲೇಬೇಕು.
ಬೆಳ್ತಂಗಡಿ ನಗರ ಪಂಚಾಯಿತಿ ಕಳೆದ ಎರಡು ವರ್ಷದಿಂದ ಪ್ರತಿ ಅಂಗಡಿ, ಮನೆಗಳಿಗೆ ಕಸದ ಬುಟ್ಟಿ ಕೊಟ್ಟು ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಕಸದ ಬುಟ್ಟಿಗೆ ಶುಲ್ಕ ವಿಧಿಸಿಲಾಗಿದೆ.
ಹೋಟೆಲ್ಗಳಿಗೆ ಕಟ್ಟುನಿಟ್ಟಿನ ಆದೇಶ: ಪೌರ ಕಾರ್ಮಿಕರು ಪ್ರತಿದಿನ ಟ್ರಾಕ್ಟರ್ನಲ್ಲಿ ಕಸ ಸಂಗ್ರಹಿಸಿ ಕೊಯ್ಯೂರು ಸಮೀಪದ ಪ್ರದೇಶವೊಂದರಲ್ಲಿ ಡಂಪ್ ಮಾಡುತ್ತಾರೆ.
ಆದರೆ ಕೆಲವೊಂದು ಹೊಟೇಲ್ನವರು ಮಾತ್ರ ತಾಜ್ಯ ಸೂಕ್ತವಾಗಿ ವಿಲೇವಾರಿ ಮಾಡದೆ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ. ಇತ್ತೀಚೆಗೆ ಜಿಲ್ಲಾಧಿಕಾರಿ ಗಮನಕ್ಕೆ ಈ ವಿಚಾರ ಬಂದು ಅಂತಹ ಹೊಟೇಲ್ಗಳಿಗೆ ಬೀಗ ಹಾಕಿಸಿದ್ದೂ ಇದೆ. ಇದೀಗ ನ.ಪಂ. ತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡಲು ಹೊಟೇಲ್ಗಳಿಗೆ ಕಟ್ಟುನಿಟ್ಟಾಗಿ ಆದೇಶಿಸಿದೆ.
ಚರಂಡಿಗೇ ಎಸೆಯುತ್ತಾರೆ ಕಸ: ಮಳೆಗಾಲದಲ್ಲಿ ಇಲ್ಲಿನ ಜನತೆಯನ್ನು ಕಾಡುವ ಮತ್ತೊಂದು ಸಮಸ್ಯೆ ಚರಂಡಿಗಳು ಕಟ್ಟಿಕೊಳ್ಳುವುದು.
ಅಂಗಡಿ ಮುಂಗಟ್ಟಿನವರಿಗೆ ಕಸ ವಿಲೇವಾರಿ ಮಾಡಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದ್ದರೂ ಕೆಲವರು ಕಸವನ್ನು ಚರಂಡಿಗೇ ಎಸೆಯುತ್ತಾರೆ. ಇದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯದೆ ರಸ್ತೆ ಮೇಲೆ ಹರಿಯುವುದು ಮಾಮೂಲು. ಹಳೆಕೋಟೆ ಎಂಬಲ್ಲಿ ಚರಂಡಿ ಮಣ್ಣಿನಿಂದ ಮುಚ್ಚಿಹೋಗಿರುವುದರಿಂದ ಮಳೆ ನೀರೆಲ್ಲ ಮುಖ್ಯ ರಸ್ತೆಯ ಮೇಲೆ ಹೋಗುತ್ತಿದೆ.
ಅಳದಂಗಡಿ, ವೇಣೂರು, ಗೇರುಕಟ್ಟೆ, ಮಡಂತ್ಯಾರು, ಹೊಸಂಗಡಿ, ನಾರಾವಿ, ಅಂಡಿಂಜೆ, ಮುಂಡಾಜೆ, ಚಾರ್ಮಾಡಿ, ಕಕ್ಕಿಂಜೆ ಪೇಟೆಗಳು ತಕ್ಕ ಮಟ್ಟಿಗೆ ಸ್ವಚ್ಛವಾಗಿವೆ. ಅಲ್ಲಲ್ಲಿ ಪ್ಲಾಸ್ಟಿಕ್ ಮನೆಗಳನ್ನು ನಿರ್ಮಿಸಲಾಗಿದ್ದು ತ್ಯಾಜ್ಯ ಒಂದೆಡೆ ಸಂಗ್ರಹವಾಗುವಂತೆ ವ್ಯವಸ್ಥೆ ಮಾಡಲಾಗಿದೆ.
ನಾಗರಿಕರೂ ಚಿಂತಿಸಬೇಕು...
ತ್ಯಾಜ್ಯದ ಸಮಸ್ಯೆಗೆ ಆಡಳಿತವನ್ನೇ ದೂರಿ ಪ್ರಯೋಜನವಿಲ್ಲ. ನಾಗರಿಕರೂ ಕಿಂಚಿತ್ ಈ ಬಗ್ಗೆ ಚಿಂತಿಸಬೇಕು. ಮನೆ, ಅಂಗಡಿಯಲ್ಲಾದ ಕಸವನ್ನು ತಾವೇ ಸೂಕ್ತವಾಗಿ ವಿಲೇವಾರಿ ಮಾಡಿದರೆ ಪರಿಸರ ಸ್ವಚ್ಛವಾಗಿರಲು ಸಾಧ್ಯ. ರಸ್ತೆ ಬದಿಗೆ ತಂದು ಎಸೆಯುವುದು ಸಲ್ಲದು.
- ದೀಪಕ್ ಅಳದಂಗಡಿ