ಅಪಘಾತ ಪ್ರಕರಣ:ಪರಿಹಾರ ನೀಡಲು ಕೆಎಸ್ಸಾರ್ಟಿಸಿಗೆ ಕೋರ್ಟ್ ಆದೇಶ
ಪುತ್ತೂರು: ತಾಲೂಕಿನ ಸಂಟ್ಯಾರ್ ಎಂಬಲ್ಲಿ ಕೆಎಸ್ಆರ್ಟಿಸಿ ಬಸ್ಸು ಮತ್ತು ಜೀಪು ಮತ್ತು ಡಿಕ್ಕಿ ಸಂಭವಿಸಿ ಪುತ್ತೂರು ಪುರಸಭಾ ಸದಸ್ಯೆ ಸಹಿತ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಮೃತಪಟ್ಟ ಘಟನೆಗೆ ಸಂಬಂಧಿಸಿ ಮೃತರ ಕುಟುಂಬಕ್ಕೆ ರು. 18.7 ಲಕ್ಷ ಪರಿಹಾರ ನೀಡಲು ನ್ಯಾಯಾಲಯ ಕೆಎಸ್ಆರ್ಟಿಸಿಗೆ ಆದೇಶಿಸಿದೆ. ಕಳೆದ ಜೂ. 2ರಂದು ಮಾಣಿ ಮೈಸೂರು ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಜೀಪನಲ್ಲಿ ಪ್ರಯಾಣಿಸುತ್ತಿದ್ದ ಪುರಸಭಾ ಸದಸ್ಯೆ ಪುತ್ತೂರು ಕಸ್ಬಾದ ಪರ್ಲಡ್ಕ ನಿವಾಸಿ ಲೀನಾ ಮಸ್ಕರೇನಸ್, ಅವರ ಪತಿ ಪೀಟರ್ ಮಸ್ಕರೇನಸ್, ಪುತ್ರ ಪ್ರೀತೇಶ್ ಮಸ್ಕರೇನಸ್ ಮತ್ತು ಪೀಟರ್ ಅವರ ಸಹೋದರ ಅಂತೋಣಿ ಮಸ್ಕರೇನಸ್ ಮೃತಪಟ್ಟಿದ್ದರು. ದಾವೆಯ ವಿಚಾರಣೆ ನಡೆಸಿದ ಜಿಲ್ಲಾ 5ನೇ ಹೆಚ್ಚುವರಿ ನ್ಯಾಯಾಲಯ ರು. 18.7 ಲಕ್ಷ ಪರಿಹಾರ ನೀಡುವಂತೆ ಕೆಎಸ್ಆರ್ಟಿಸಿಗೆ ಆದೇಶ ನೀಡಿದೆ.
ಮಗಳ ಮೇಲೆಯೇ ಅತ್ಯಾಚಾರ: ಆರೋಪಿ ಸೆರೆ
ಮೂಲ್ಕಿ: ತಂದೆಯೇ ಮಗಳ ಮೇಲೆ ನಿರಂತರ ಎರಡು ತಿಂಗಳ ಕಾಲ ಅತ್ಯಾಚಾರ ನಡೆಸಿದ ಪ್ರಕರಣ ಬಜಪೆ ಠಾಣೆ ವ್ಯಾಪ್ತಿಯ ಕರಂಬಾರು ಎಂಬಲ್ಲಿ ನಡೆದಿದೆ.
ಮಗಳ ಮೇಲೆ ಅತ್ಯಾಚಾರ ನಡೆಸಿದ ಕರಂಬಾರು ನಿವಾಸಿ ಚಂದ್ರಶೇಖರ (48) ಎಂಬಾತನನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಚಂದ್ರಶೇಖರನ ಪತ್ನಿ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಪತ್ನಿಯ ತಂಗಿ ಹಾಗೂ 17ರ ಹರೆಯದ ಮಗಳು ಚಂದ್ರಶೇಖರನ ಮನೆಯಲ್ಲಿ ಉಳಿದುಕೊಂಡಿದ್ದರು. ಮದ್ಯ ಸೇವಿಸಿ ಮನೆಗೆ ಬರುತ್ತಿದ್ದ ಚಂದ್ರಶೇಖರ ಕಳೆದೆರಡು ತಿಂಗಳಿನಿಂದ ಮಗಳ ಮೇಲೆ ಅತ್ಯಾಚಾರ ನಡೆಸುತ್ತಿದ್ದ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಮಗಳಿಗೆ ಜೀವಬೆದರಿಕೆಯೊಡ್ಡಿದ್ದ. ಈ ಘಟನೆ ಪತ್ನಿಯ ತಂಗಿ ಗಮನಕ್ಕೂ ಬಂದಿಲ್ಲ ಎನ್ನಲಾಗಿದೆ.
ಸ್ಥಳೀಯರಿಗೆ ವಿಷಯ ತಿಳಿದು ಈ ಬಗ್ಗೆ ಚೈಲ್ಡ್ ಲೈನ್ಗೆ ದೂರು ನೀಡಿದ್ದಾರೆ. ಚೈಲ್ಡ್ ಲೈನ್ ಅಧಿಕಾರಿಗಳು ಈ ಬಗ್ಗೆ ಬಜ್ಪೆ ಪೊಲೀಸರಿಗೆ ಶುಕ್ರವಾರ ದೂರು ನೀಡಿದ್ದು, ಆರೋಪಿಯ ವಿರುದ್ಧ ಅತ್ಯಾಚಾರ ಮತ್ತು ಮಕ್ಕಳ ರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ವಿಚಾರಣೆ ವೇಳೆ ಚಂದ್ರಶೇಖರ ತಪ್ಪೊಪ್ಪಿಕೊಂಡಿದ್ದು, ವೈದ್ಯಕೀಯ ಪರೀಕ್ಷೆಯಿಂದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಕಳೆದ ತಿಂಗಳ ಹಿಂದೆ ಮೂಲ್ಕಿಯಲ್ಲಿ ಇಂತಹದ್ದೇ ಅಮಾನವೀಯ ಘಟನೆ ನಡೆದಿದ್ದು, ಜನತೆ ಎಚ್ಚರಿಕೆಯಿಂದ ಇರುವಂತೆ ಪೊಲೀಸ್ ಇಲಾಖೆ ತಿಳಿಸಿದೆ.