ತ್ಯಾಜ್ಯ ವಿಲೇಗೆ 'ಕಸ'ರತ್ತು ಮಾಡಿದ್ರೆ ಸವಲತ್ತು
ಮಸಲತ್ತು ನಡೆಸಿದರೆ ತಪ್ಪದು ಆಪತ್ತು!
ಟಿ ಜಿತೇಂದ್ರ ಕುಂದೇಶ್ವರ
ಮಂಗಳೂರು: ದಡ್ಡರ ಬಳಿ ಚಿನ್ನ ಇದ್ದರೂ ಕಲ್ಲು ಕಸದಂತೆ, ಬುದ್ಧಿವಂತರ ಬಳಿ ಕಸ ಇದ್ದರೂ ಸಂಪತ್ತು ಮಾಡಿಕೊಳ್ಳುತ್ತಾರೆ. ಸಾಮಾನ್ಯ ಬುದ್ಧಿಮತ್ತೆಯವರು ಕಸವನ್ನು ಹಣಕೊಟ್ಟು ವಿಲೇವಾರಿ ಮಾಡುತ್ತಾರೆ, ಆದರೆ ನಮ್ಮೂರಿನ ಅತಿ ಬುದ್ಧಿವಂತರು ಸರಿಯಾಗಿ ಕಸ ವಿಲೇವಾರಿ ಮಾಡದೆ ಸ್ವಂತ ತಿಜೋರಿ ತುಂಬಿಸುತ್ತಾರೆ...
ಕಸ ವಿಲೇವಾರಿಗೆ ಸರಿಯಾಗಿ ಕಸರತ್ತು ಮಾಡಿದರೆ ಕಷ್ಟದ ಕೆಲಸವೇನಲ್ಲ. ವಿಶ್ವಕಪ್ ಪುಟ್ಬಾಲ್ ವೀಕ್ಷಣೆಗೆ ಬ್ರಿಜೆಲ್ಗೆ ಹೋಗುವಂಥ ಸೋಗಲಾಡಿ ಪ್ರವಾಸ ಮಾಡದೆ, ವಿಶ್ವದಲ್ಲಿ ಕಸ ನಿರ್ವಹಣೆ ಮಾಡುವಲ್ಲಿ ಯಶಸ್ವಿಯಾದ ದೇಶಗಳನ್ನು ಪಟ್ಟಿ ಮಾಡಿ ತಂತ್ರಜ್ಞರ ಜತೆ ಅಧ್ಯಯನ ಪ್ರವಾಸ ಹೋದರೆ ಕಸ ವಿಲೇವಾರಿ ಸ್ಥಳಿಯಾಡಳಿತ ಸಂಸ್ಥೆಗೆ ಲಾಭ ತಂದುಕೊಡಬಲ್ಲದು.
ಉದಾಹರಣೆಗೆ ಸ್ವೀಡನ್ ದೇಶ ಕಸ ವಿಲೇವಾರಿಯಲ್ಲಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ. ಎಲ್ಲಿಯವರೆಗೆ ಎಂದರೆ ತಮ್ಮ ದೇಶದ ಎಲ್ಲ ತ್ಯಾಜ್ಯವನ್ನು ಸಂಸ್ಕರಿಸಿ ವಿದ್ಯುತ್ ಉತ್ಪಾದಿಸುತ್ತದೆ. ಅಲ್ಲದೆ ವಿದೇಶದ ತ್ಯಾಜ್ಯಗಳನ್ನು ಪಡೆದು ಸಂಸ್ಕರಿಸಿ ಲಾಭ ಗಳಿಸುತ್ತಿದೆ. ತ್ಯಾಜ್ಯ ಪಡೆಯಲು ಹಣ, ತ್ಯಾಜ್ಯದಿಂದ ಶಾಖೋತ್ಪನ್ನ ಮಾಡಿ ಲಾಭ ಗಳಿಸುತ್ತದೆ. ಬುದ್ಧಿವಂತರು ಹೇಳಿಕೊಳ್ಳುವ ಜಿಲ್ಲೆಯಲ್ಲಿ ಇಂಥ ಬುದ್ಧಿವಂತಿಕೆ ಕೆಲಸ ಮಾಡುವ ಇಚ್ಛಾಶಕ್ತಿಯೇ ಇಲ್ಲ. ಹಸಿ ತ್ಯಾಜ್ಯಗಳಿಂದ ಗೊಬ್ಬರ ಮಾಡಬಹುದು. ಉರಿಯಬಹುದಾದ ತ್ಯಾಜ್ಯಗಳಿಂದ ವಿದ್ಯುತ್ ತಯಾರಿಸಬಹುದು. ಗುಜುರಿಗಳಿಂದ ಲೋಹ ಮರುಬಳಕೆ ಮಾಡಬಹುದು.
ಮಹಾನಗರ ಪಾಲಿಕೆ ಅಧಿಕಾರಿ, ಜನಪ್ರತಿನಿಧಿಗಳು ಬುದ್ಧಿವಂತಿಕೆ ಬಳಸಿ ಇಂಥ ಸಂಸ್ಥೆಗಳನ್ನು ಹುಡುಕಿದರೆ ಆದಾಯವನ್ನೇ ಗಳಿಸಬಹುದು. ಕಡೇ ಪಕ್ಷ ನಗರ ನೈರ್ಮಲ್ಯ ಮತ್ತು ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟಲು, ಜನರ ಆರೋಗ್ಯಕ್ಕಾಗಿ ಹಣಕೊಟ್ಟಾದರೂ ಕಸ ವಿಲೇವಾರಿ ಮಾಡಬೇಕಿದೆ.
ತ್ಯಾಜ್ಯ ಸಂಗ್ರಹ ಇಲ್ಲ: ಪ್ಲಾಸ್ಟಿಕ್ ಗಾಜು, ಬ್ಯಾಟರಿ, ಬಲ್ಬು, ಔಷಧ, ಲೋಹ, ಪೇಪರ್ ಮತ್ತು ಹಸಿ ತ್ಯಾಜ್ಯಗಳನ್ನು ಪ್ರತ್ಯೇಕವಾಗಿಸಿ ಸಂಗ್ರಹಿಸಿದರೆ ಕೆಲಸ ಮತ್ತಷ್ಟು ಸುಲಭ. ಮಂಗಳೂರಲ್ಲಿಯೂ ತ್ಯಾಜ್ಯ ವಿಂಗಡಣೆಗೆ ಮೂರು ಡಬ್ಬಿ ಮಾಡಿ ಎರಡು ವಾರ್ಡ್ಗಳಲ್ಲಿ ಉಚಿತವಾಗಿ ಹಂಚಿ ಉಚಿತ ಪ್ರಚಾರ ಪಡೆದುಕೊಂಡದ್ದು ಬಿಟ್ಟರೆ ಕಸ ಸಂಗ್ರಹ ನಡೆಯುತ್ತಿಲ್ಲ.
ಸಂಸ್ಕರಣೆ ಓಕೆ: ಪಚ್ಚನಾಡಿಯಲ್ಲಿ ತ್ಯಾಜ್ಯ ಸಂಸ್ಕರಣೆ ಮಾತ್ರ ಯಶಸ್ವಿಯಾಗಿ ನಡೆಯುತ್ತಿದೆ. ಆದರೆ ನಗರದ ಕಸ ಸಂಗ್ರಹ ಮತ್ತು ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಮುಂಬೈಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಿ ಯಶಸ್ವಿಯಾದ ಆಂಟನಿ ವೇಸ್ಟ್ ಮ್ಯಾನೇಜ್ ಮೆಂಟ್ ಸಂಸ್ಥೆಗೆ ಮಹಾನಗರದಲ್ಲಿ 7 ವರ್ಷಗಳ ಕಾಲ ತ್ಯಾಜ್ಯ ವಿಲೇವಾರಿ ಮಾಡಲು 19 ಕೋಟಿ ಗುತ್ತಿಗೆ ಪಡೆದುಕೊಂಡು ಅನೇಕ ವರ್ಷಗಳೇ ಸಂದಿವೆ, ಆದರೆ ಕಾರ್ಯಾದೇಶ ನೀಡಲು ಮಹಾನಗರ ಪಾಲಿಕೆ ಜನಪ್ರತಿನಿಧಿಗಳು ಮೀನ ಮೇಷ ಲೆಕ್ಕ ಹಾಕುತ್ತಿದ್ದಾರೆ. ನಾಗರಿಕ ಹಿತರಕ್ಷಣೆ ವೇದಿಕೆ ಅಧ್ಯಕ್ಷ ಹನುಮಂತ ಕಾಮತ್ ಪ್ರಕಾರ, ಕಾರ್ಪೊರೇಟರ್ಗಳು ಸ್ವಹಿತಾಸಕ್ತಿಯಿಂದ ಕಸ ವಿಲೇವಾರಿ ತುಂಡು ಗುತ್ತಿಗೆದಾರರ ಹಿತರಕ್ಷಣೆಗೆ ನಿಂತಿದ್ದಾರೆ. ನಾಗರಿಕರ ಹಿತರಕ್ಷಣೆಯ ಚಿಂತೆಯೇ ಇಲ್ಲ.
ಈ ಆರೋಪದಲ್ಲಿ ಹುರುಳಿದೆ. ಕಸ ವಿಲೇವಾರಿ ಗುತ್ತಿಗೆ ಕುರಿತು ಸಂಸ್ಥೆಯವರು ಅಂತಿಮ ಕಾರ್ಯಾದೇಶ ಪಡೆಯುವ ಮುನ್ನ ಪ್ರಾತ್ಯಕ್ಷಿಕೆ ಮೂಲಕ ಕಾರ್ಪೊರೇಟರ್ಗಳಿಗೆ ಸಾದ್ಯಂತ ಮಾಹಿತಿ ನೀಡಿದರು. ಆದರೆ ಸ್ವತಃ ಆಡಳಿತ ಪಕ್ಷದ ಕಾಂಗ್ರೆಸ್ ಕಾರ್ಪೊರೇಟರ್ಗಳೇ ಕಸ ವಿಲೇವಾರಿ ಗುತ್ತಿಗೆ ಕಾರ್ಯಾದೇಶ ನೀಡಬಾರದು ಎಂದು ಗಲಾಟೆ ಮಾಡಿದ್ದರು.
ಮೇಯರ್ ಏಕಾಂಗಿ ಸಾಹಸ: ನಗರ ಸೌಂದರ್ಯ ಹಾಳಾಗುತ್ತದೆ ಎಂದು ಅರ್ಧಕ್ಕೂ ಹೆಚ್ಚು ಕಸ ತುಂಬಿಸುವ ಕಬ್ಬಿಣದ ತೊಟ್ಟಿಗಳನ್ನು ತೆರವು ಮಾಡಿಯಾಗಿದೆ. ಜನ ಕಸ ಹಾಕಲು ಪಡಿ ಪಾಟಿಲು ಪಡುತ್ತಿದ್ದಾರೆ. ಮಹಾನಗರ ಪಾಲಿಕೆ ಮಾತ್ರ ಈ ಕುರಿತು ಚಿಂತೆ ಮಾಡುತ್ತಿಲ್ಲ. ಮೇಯರ್ ಮಹಾಬಲ ಮಾರ್ಲ ಅವರು ಏಕಾಂಗಿಯಾಗಿ ಕಸ ವಿಲೇವಾರಿ ಸಮಸ್ಯೆ ಪರಿಹರಿಸಲು ಮುಂದೆ ಬಂದಿದ್ದಾರೆ. ಹೊಸ ಗುತ್ತಿಗೆ ಬೇಡ ಎನ್ನುತ್ತಿದ್ದ ಕಾರ್ಪೊರೇಟರ್ಗಳ ಮನ ಒಲಿಸುವ ಪ್ರಯತ್ನ ಮಾಡಿದ್ದಾರೆ.
'ಕಸ ವಿಲೇವಾರಿಗೆ ಆಂಟನಿ ಸಂಸ್ಥೆ ಜತೆ ಗುತ್ತಿಗೆ ರದ್ದಾಗಿಲ್ಲ. ಮುಂದಿನ 7 ವರ್ಷಗಳ ಕಾಲ ಅವರೇ ಕಸ ವಿಲೇವಾರಿ ಮಾಡಲಿದ್ದಾರೆ. ಮಹಾನಗರ ಪಾಲಿಕೆ ಮತ್ತು ಆಂಟನಿ ವೇಸ್ಟ್ ಮ್ಯಾನೇಜ್ಮೆಂಟ್ ಸಂಸ್ಥೆ ಜತೆ ಶೀಘ್ರದಲ್ಲಿ ಅಂತಿಮ ಒಪ್ಪಂದ ನಡೆಯಲಿದೆ. ಸಂಸ್ಥೆ ಒಂದುವರೆ ತಿಂಗಳಲ್ಲಿ ಒಂದು ವಲಯದಲ್ಲಿ ಕಾರ್ಯಾರಂಭಿಸಲಿದ್ದು, ಮೂರು ತಿಂಗಳಲ್ಲಿ ಇನ್ನೊಂದು ವಲಯದಲ್ಲಿ ಕಾಮಗಾರಿ ಆರಂಭಿಸಲಿದ್ದಾರೆ' ಎಂದು ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ತಿಳಿಸಿದ್ದಾರೆ.