ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅವಿಭಜಿತ ಜಿಲ್ಲೆಯಲ್ಲಿ ಲೋಕಾಯುಕ್ತ ಸಭೆ

Vishwanath S
Updated On : 3 Mar 2014, 12:10 pm

ಮಂಗಳೂರು: ಲೋಕಾಯುಕ್ತ ಅಧಿಕಾರಿಗಳು ಮಾ.27ರಿಂದ ಮೂರು ದಿನ ಕಾಲ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಸಾರ್ವಜನಿಕ ದೂರು ಸ್ವೀಕಾರ ಮತ್ತು ಇತ್ಯರ್ಥ ಸಭೆ ಹಮ್ಮಿಕೊಳ್ಳಲಿದ್ದಾರೆ.
ಭಾನುವಾರ ಜಿಲ್ಲಾಧಿಕಾರಿ ಕಚೇರಿ ಕಚೇರಿಯಲ್ಲಿ ಉಪಲೋಕಾಯುಕ್ತ ನ್ಯಾಯಮೂರ್ತಿ ಸುಭಾಸ್ ಅಡಿ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಇದನ್ನು ಪ್ರಕಟಿಸಲಾಯಿತು.
ಮಂಗಳೂರು, ಉಡುಪಿ ಹಾಗೂ ಪುತ್ತೂರಿನಲ್ಲಿ ಪ್ರತ್ಯೇಕ ಸಭೆ ಹಮ್ಮಿಕೊಳ್ಳಲಾಗುವುದು. ಮಾ.20ರಿಂದ 3 ದಿನ ಸಾರ್ವಜನಿಕರಿಗೆ ಜಾಹಿರಾತು ಮೂಲಕ ಸಭೆಯ ಬಗ್ಗೆ ತಿಳುವಳಿಕೆ ನೀಡಲಾಗುವುದು. ಸರ್ಕಾರಿ ಇಲಾಖೆಯ ಕೆಲಸ ಸೇರಿದಂತೆ ಯಾವುದೇ ಕುಂದುಕೊರತೆಗಳಿದ್ದರೆ ನೇರವಾಗಿ ಲೋಕಾಯುಕ್ತ ಸಭೆಯಲ್ಲಿ ಪ್ರಸ್ತಾಪಿಸಬಹುದು. ದೂರು ಅರ್ಜಿ ವಿಲೇವಾರಿ ವರೆಗೆ ಸಭೆ ಮುಂದುವರಿಯಲಿದೆ. ಚುನಾವಣೆ ನೀತಿ ಸಂಹಿತೆ ಇದಕ್ಕೆ ಅಡ್ಡಿಯಾಗದು. ಬೆಳಗ್ಗೆ 8 ರಿಂದ ರಾತ್ರಿ 9.30ರ ವರೆಗೂ ಸಭೆ ನಡೆಸಬಹುದು. ಅಧಿಕಾರಿಗಳೂ ಇಲಾಖೆಯ ಆಂತರಿಕ ತೊಂದರೆಯನ್ನು ಗಮನಕ್ಕೆ ತರಬಹುದು ಎಂದು ನ್ಯಾಯಮೂರ್ತಿ ಸುಭಾಸ್ ಅಡಿ ಹೇಳಿದರು.
ಮರಳುಗಾರಿಕೆ ಸೂಚನೆ: ಅಕ್ರಮ ಮರಳುಗಾರಿಕೆ ತಡೆಗಟ್ಟಲು ಸೂಕ್ತ ಕ್ರಮಕೈಗೊಳ್ಳುವಂತೆ ಉಭಯ ಜಿಲ್ಲೆಯ ಭೂ ಗಣಿ ವಿಜ್ಞಾನ ಅಧಿಕಾರಿಗಳಿಗೆ, ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯ್ತಿ ಮಟ್ಟದ ಅಧಿಕಾರಿಗಳಿಗೆ ತಾಕೀತು ಮಾಡಿದ ಉಪಲೋಕಾಯುಕ್ತರು ಸದ್ಯದ ಮರಳುಗಾರಿಕೆ ಪರಿಸ್ಥಿತಿಯನ್ನು ತಿಳಿದುಕೊಂಡರು.
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸ್ಪಷ್ಟನೆ ನೀಡಿ, ಕರಾವಳಿಯ ಮೂರು ಜಿಲ್ಲೆ ಸಿಆರ್‌ಝಡ್ ವ್ಯಾಪ್ತಿಗೆ ಒಳಪಡುವುದರಿಂದ ಮರಳುಗಾರಿಕೆ ಹಿಂದಿನಂತೆ ನಡೆಸುವಂತೆ ಸರ್ಕಾರ ವಿನಾಯ್ತಿ ನೀಡಿದೆ. ಇಲ್ಲಿ ಯಾವುದೇ ತೊಂದರೆ ಇಲ್ಲ, ಹೊರ ರಾಜ್ಯಕ್ಕೆ ಮರಳು ಸಾಗಾಟಕ್ಕೆ ಅವಕಾಶ ಇಲ್ಲ ಎಂದರು.
ಪುತ್ತೂರು ಎಪಿಎಂಸಿಯಲ್ಲಿ 56 ಮಂದಿ ಅಡಕೆ ರೈತರಿಗೆ ಹಣ ಪಾವತಿಸದೆ ವಂಚಿಸಿದ ವ್ಯಾಪಾರಿ ವಿರುದ್ಧ ಪ್ರಕರಣ ದಾಖಲಿಸುವಂತೆ ಜಿಲ್ಲಾ ಎಸ್ಪಿಗೆ ಉಪಲೋಕಾಯುಕ್ತ ನಿರ್ದೇಶನ ನೀಡಿದರು.
ಮದ್ಯ ಕೋಟಾ: ಜಿಲ್ಲೆಯಲ್ಲಿ ಪರವಾನಗಿ ಇರುವವರಿಗೆ ಮಾತ್ರ ಮದ್ಯ ಪೂರೈಕೆ ಮಾಡುತ್ತೇವೆ. ಮದ್ಯ ಪೂರೈಕೆಗೆ ಕೋಟಾ ನಿಗದಿಪಡಿಸಿಲ್ಲ, ಆರದರೆ ಗುರಿ ನಿಗದಿಪಡಿಸಲಾಗಿದೆ ಎಂದು ಅಬಕಾರಿ ಅಧಿಕಾರಿ ಸಮಜಾಯಿಸಿ ನೀಡಿದರು. ಇದು ಎರಡು ಒಂದೇ ಎಂದ ಉಪಲೋಕಾಯುಕ್ತರು, ಕೋಟಾ ಮುಗಿಸುವ ಇರಾದೆಯಲ್ಲಿ ಮದ್ಯ ಅನಧಿಕೃತ ಮಾರಾಟವಾಗುವ ಸಾಧ್ಯತೆ ಇದೆ, ಈ ಬಗ್ಗೆ ಜಾಗೃತೆ ವಹಿಸುವಂತೆ ಸೂಚಿಸಿದರು.
ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ, ಪ್ರಾವಿಡೆಂಟ್ ಫಂಡ್ ಲಭಿಸುವ ಬಗ್ಗೆ ಉಪಲೋಕಾಯುಕ್ತರು ಮಾಹಿತಿ ಬಯಸಿದರು. ಕಾರ್ಮಿಕ ಅಧಿಕಾರಿ ಸಮರ್ಪವಾಗಿದೆ ಎಂದು ಉತ್ತರಿಸಿದರೂ ತೃಪ್ತರಾಗದ ಉಪಲೋಕಾಯುಕ್ತರು, ಕಾರ್ಮಿಕರ ಹಿತಾಸಕ್ತಿಗೆ ಧಕ್ಕೆ ಬಾರದಂತೆ ಕಾರ್ಯನಿರ್ವಹಿಸಿ ಎಂದು ಸಲಹೆ ಮಾಡಿದರು. ಮಂಗಳೂರಿನಲ್ಲಿ ಗುತ್ತಿಗೆ ಕಾರ್ಮಿಕರಿಗೆ ಟ್ರಾನ್ಸಿಸ್ಟ್ ಹೋಂ ತೆರೆಯಲು ನಿರ್ಧರಿಸಲಾಗಿದೆ. ಇದರಿಂದ ಸುಮಾರು 400 ಗುತ್ತಿಗೆ ಕಾರ್ಮಿಕ ಕುಟುಂಬಕ್ಕೆ ನೆರವಾಗಲಿದೆ. ಈ ಬಗ್ಗೆ ನಗರ ಯೋಜನಾ ಪ್ರಾಧಿಕಾರ ಜತೆ ಚರ್ಚೆ ನಡೆಸಲಾಗಿದೆ ಎಂದು ಕಾರ್ಮಿಕ ಅಧಿಕಾರಿ ತಿಳಿಸಿದರು.
ಲೋಕಾಯುಕ್ತ ಎಸ್ಪಿ ವೇದಮೂರ್ತಿ, ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಸಂತೋಷ್ ಕುಮಾರ್, ಉಡುಪಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕನಕವಲ್ಲಿ, ದ.ಕ.ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement