ಇಂದು ದ.ಕ. ಬಂದ್: 6ರಿಂದ 6ರ ವರೆಗೆ
ಮಂಗಳೂರು: ಎತ್ತಿನಹೊಳೆ ಯೋಜನೆಗೆ ಚಿಕ್ಕಬಳ್ಳಾಪುರದಲ್ಲಿ ಶಿಲಾನ್ಯಾಸ ನಡೆಸುವುದನ್ನು ವಿರೋಧಿಸಿ ಸೋಮವಾರ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ದ.ಕ.ಜಿಲ್ಲೆ ಬಂದ್ ಕರೆ ನೀಡಲಾಗಿದೆ. ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಿರುವುದಾಗಿ ರಾಜಕೀಯ ಪಕ್ಷಗಳು, ವಿವಿಧ ಸಂಘ ಸಂಸ್ಥೆಗಳು ಹೇಳಿಕೆ ನೀಡಿದ್ದು, ಬಲಾತ್ಕಾರ ಬಂದ್‌ಗೆ ಆಸ್ಪದವಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಜಿಲ್ಲೆಯ ಇತಿಹಾಸದಲ್ಲಿ ರಾಜಕೀಯ ಪಕ್ಷಗಳ ನೇತೃತ್ವವಿಲ್ಲದೆ ಜನಸಮೂಹ ಒಟ್ಟಾಗಿ ಸಂಘ ಸಂಸ್ಥೆಗಳ ಜತೆಗೂಡಿ ನೀಡಿರುವ ಮೊದಲ ಬಂದ್ ಕರೆ ಇದಾಗಿದೆ.
ಹಾಲು, ಔಷಧ ಮುಂತಾದ ಅಗತ್ಯ ವಸ್ತು ಪೂರೈಕೆ ಹೊರತುಪಡಿಸಿ ಇತರೆ ವಹಿವಾಟಿಗೆ ಅವಕಾಶ ಇರುವುದಿಲ್ಲ. ಶಾಲಾ ಕಾಲೇಜುಗಳಿಗೆ ರಜೆ ಸಾರಿಲ್ಲ. ಜಿಲ್ಲಾ ಮಟ್ಟದ ಪಿಯುಸಿ ವಿಜ್ಞಾನ ಗಣಿತ ಪರೀಕ್ಷೆ ಮರುದಿನಕ್ಕೆ ಮುಂದೂಡಲಾಗಿದೆ. ಆದರೆ ಸಿಬಿಎಸ್‌ಸಿ ಪರೀಕ್ಷೆ ನಿಗದಿಯಂತೆ ನಡೆಯಲಿದೆ. ಖಾಸಗಿ ಬಸ್, ವಾಹನಗಳ ಸಂಚಾರಕ್ಕೆ ದುರಸ್ತರವಾಗಲಿದ್ದು, ಸರ್ಕಾರಿ ಬಸ್‌ಗಳು ಓಡಾಟ ನಡೆಸಲಿವೆ. ಬೆಳಗ್ಗೆ ಕಾಲೇಜು ವಿದ್ಯಾರ್ಥಿಗಳು ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಿದ್ದು, ಸಂಜೆ ನೇತ್ರಾವತಿ ಸಂರಕ್ಷಣಾ ಸಮಿತಿ ಹಂಪನಕಟ್ಟೆ ಸಿಗ್ನಲ್‌ನಲ್ಲಿ ಪ್ರತಿಭಟಿಸಲಿದೆ.
ವೃಥಾ ಪೇಟೆಗೆ ಬರಬೇಡಿ
ತುರ್ತು ಸಂದರ್ಭ ಹೊರತುಪಡಿಸಿ ಅನವಶ್ಯಕ ಪೇಟೆಗೆ ಬರುವ ಕಾರ್ಯಕ್ರಮ ಹಾಕಿಕೊಳ್ಳುವುದು ಬೇಡ. ಯಾಕೆಂದರೆ ಸ್ವಯಂ ಪ್ರೇರಿತ ಬಂದ್ ಎಂದು ಹೇಳಿದ್ದರೂ, ಕೆಲವೊಮ್ಮೆ ಒತ್ತಾಯ ಪೂರ್ವಕ ಬಂದ್ ನಡೆಸಿ ಅಹಿತಕರ ಘಟನೆಗೆ ಕಾರಣವಾಗುವ ಸಂಭವ ಇದೆ. ದೂರದೂರುಗಳಿಂದ ಬಂದುಹೋಗುವ ಬಸ್ ಸಂಚಾರವನ್ನು ಬೆಳಗ್ಗೆ 6ರೊಳಗೆ ಹಾಗೂ ಸಂಜೆ 6ರ ನಂತರ ರಸ್ತೆಗಿಳಿಸುವಂತೆ ಬಂದ್ ಸಂಘಟಕರು ಮನವಿ ಮಾಡಿದ್ದಾರೆ.
ಬಸ್ ಇಲ್ಲ, ಹೊಟೇಲ್ ಬಂದ್
ನಗರದಲ್ಲಿ ಖಾಸಗಿ ಬಸ್, ಆಟೋ ರಿಕ್ಷಾ ರಸ್ತೆಗಿಳಿಯುವುದಿಲ್ಲ. ಸರ್ಕಾರಿ ಬಸ್ ಸಂಚಾರ ಇದೆ ಎಂದು ಅಧಿಕಾರಿಗಳು ತಿಳಿಸಿದ್ದರೂ, ಜನರೇ ಬಾರದಿದ್ದರೆ ಓಡಾಟ ನಡೆಸುವುದು ಸಂಶಯ. ನಗರ ಸಾರಿಗೆ ಸಂಚರಿಸುವುದಿಲ್ಲ. ರೈಲು ಸಂಚಾರ ಎಂದಿನಂತೆ ಇರಲಿದೆ. ಆದರೆ ಅಂಗಡಿ ಮುಂಗಟ್ಟು, ಹೊಟೇಲ್ ಕೂಡ ಬಂದ್ ಇರಲಿದೆ.
ಬಿಗು ಬಂದೋಬಸ್ತ್
ಮಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಒತ್ತಾಯಪೂರ್ವಕ ಬಂದ್‌ಗೆ ಅವಕಾಶವಿಲ್ಲ. ಅಂಥದ್ದು ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹೆದ್ದಾರಿ, ರಸ್ತೆಗಳಲ್ಲಿ ಪ್ಯಾಟ್ರೋಲಿಂಗ್ ನಡೆಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಆರ್.ಹಿತೇಂದ್ರ ತಿಳಿಸಿದ್ದಾರೆ.
ಶಾಲೆ, ಕಚೇರಿ ತೆರೆದಿರುತ್ತೆ
ಜಿಲ್ಲೆಯಲ್ಲಿ ಸರ್ಕಾರಿ ಕಚೇರಿ, ಶಾಲೆ ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ಈಗ ಪರೀಕ್ಷೆ ಸಮಯವಾದ್ದರಿಂದ ರಜೆ ನೀಡುವುದಿಲ್ಲ. ಜನರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಎಲ್ಲ ವ್ಯವಸ್ಥೆ ಮಾಡಿದೆ. ಸಿಬಿಎಸ್‌ಸಿ ಪರೀಕ್ಷೆ ನಡೆಯುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯ ದೃಷ್ಟಿಯಿಂದ ರಜೆ ನೀಡುತ್ತಿಲ್ಲ ಎಂದು ಜಿಲ್ಲಾಧಿಕಾರಿ ಬಿ.ಇಬ್ರಾಹಿಂ ಸ್ಪಷ್ಟಪಡಿಸಿದ್ದಾರೆ.
ಮನವೊಲಿಸಿ ಬಂದ್
ಉಪ್ಪಿನಂಗಡಿ, ಪುತ್ತೂರು, ಫರಂಗಿಪೇಟೆ ಮುಂತಾದ ಕಡೆಗಳಲ್ಲಿ ಬಂದ್ ನಡೆಸದಿದ್ದರೆ ಸಾರ್ವಜನಿಕರು ಮನ ಒಲಿಸಲಿದ್ದಾರೆ. ಹಾಗಾಗಿ ಬಂದ್ ಸಂಪೂರ್ಣ ಯಶಸ್ವಿಯಾಗುವ ವಿಶ್ವಾಸವಿದೆ ಎನ್ನುತ್ತಾರೆ ಸಂಘಟಕ ಎಂ.ಜಿ.ಹೆಗಡೆ.