ವಸತಿಗೃಹದಲ್ಲಿ ಮಹಿಳೆ ಹತ್ಯೆ: ಆರೋಪಿ ಸೆರೆ
ಬೆಳ್ತಂಗಡಿ: ಉಜಿರೆಯ ವಸತಿಗೃಹದಲ್ಲಿ ಶನಿವಾರ ಮಹಿಳೆಯನ್ನು ಹತ್ಯೆಗೈದ ಪ್ರಕರಣದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ವಶದಲ್ಲಿರುವ ಆರೋಪಿ ಚಿಕ್ಕಮಗಳೂರು ನಿವಾಸಿ ಬಾಲು ಯಾನೆ ಭಾಳಪ್ಪ. ಶನಿವಾರ ರಾತ್ರಿಯೇ ಆರೋಪಿ ಬಂಧನಕ್ಕೆ ಪೊಲೀಸರು ಕಾರ್ಯತತ್ಪರರಾಗಿದ್ದರು.
ಈತ ಚಿಕ್ಕಮಗಳೂರಿನವಳೇ ಆದ ಭಾಗ್ಯ ಎಂಬಾಕೆಯನ್ನು ಶನಿವಾರ ಮಧ್ಯಾಹ್ನ ವಸತಿಗೃಹದಲ್ಲಿ ರೂಂ ಮಾಡಿ ಕೊಲೆಗೈದು ಸಂಜೆ ಸುಮಾರು 5 ಗಂಟೆಯ ವೇಳೆ ತಾನು ಬಂದಿದ್ದ ಬೈಕಿನಲ್ಲೇ ಪರಾರಿಯಾಗಿದ್ದ. ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಬೆಳ್ತಂಗಡಿ ಪೊಲಿಸರು ಕೊಲೆಗಾರನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಕೊಲೆ ನಡೆದ ಕೊಠಡಿಯಲ್ಲಿ ಅವರು ತಂದಿದ್ದ ಬ್ಯಾಗ್‌ಗಳನ್ನು ಜಾಲಾಡಿದಾಗ ಹಲವು ಮಾಹಿತಿಗಳು ಲಭಿಸಿದೆ. ಇಲ್ಲೇ ಲಭಿಸಿದ ಸಿಮ್ ಕಾರ್ಡ್‌ನ ಸಹಾಯದಿಂದ ಈತನನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ ಎನ್ನಲಾಗಿದೆ. ಬಾಲು ಮತ್ತು ಭಾಗ್ಯಳ ಪಾಸ್‌ಪೋರ್ಟ್ ಸೈಜ್‌ನ ಭಾವಚಿತ್ರಗಳು ಲಭಿಸಿದೆ. ಬೆಂಗಳೂರಿನಲ್ಲಿ ತಂಗಿದ್ದ ಮಾಹಿತಿಗಳು ಲಭ್ಯವಾಗಿದ್ದವು. ಬೆಂಗಳೂರಿನ ಲಾಡ್ಜ್‌ನ ಸಿಸಿ ಟಿವಿಯಲ್ಲಿ ಈತನ ದೃಶ್ಯಗಳು ಸ್ಪಷ್ಟವಾಗಿ ಪತ್ತೆಯಾಗಿತ್ತು. ಅಲ್ಲಿ ಆತನ ವಿಳಾಸ ದೊರಕಿದ್ದರಿಂದ ಸುಲಭವಾಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಕೊಲೆ ಮಾಡಿದ ಬಳಿಕ ಆರೋಪಿಯು ಮಹಿಳೆಯ ಮೊಬೈಲ್ ಫೋನನ್ನು ನಿಡ್ಗಲ್ ಶಾಲೆಯ ಬಳಿ ಬಿಸಾಡಿದ್ದಾನೆ. ಭಾನುವಾರ ಪೊಲೀಸರು ಆರೋಪಿಯ ಸಹಾಯದಿಂದ ಫೋನನ್ನು ಪತ್ತೆ ಹಚ್ಚಿದ್ದಾರೆ. ಬಾಲು ಮತ್ತು ಭಾಗ್ಯ ಚಿಕ್ಕಮಗಳೂರಿನಲ್ಲಿ ಹೋಮ್‌ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಒಂದು ವರ್ಷದಿಂದ ಪರಿಚಿತರಾಗಿದ್ದ ಇವರ ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಭಾಗ್ಯಳಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಗಂಡ ಆಕೆಯನ್ನು ತೊರೆದಿರುವುದಾಗಿ ತಿಳಿದು ಬಂದಿದೆ. ಆಕೆ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು ಎಂದು ಹೇಳಲಾಗಿದೆ. ಬೇರೆ ಮದುವೆಯ ಸಿದ್ಧತೆಯಲ್ಲಿದ್ದ ಬಾಲು, ಮದುವೆಯಾಗುವುದಾಗಿ ಭಾಗ್ಯಳನ್ನು ನಂಬಿಸಿ, ಆಕೆಯೇ ತೆಗಿಸಿಕೊಟ್ಟ ಬೈಕ್‌ನಲ್ಲಿ ಉಜಿರೆಗೆ ಬಂದಿದ್ದ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಶಂತನು ಸಿನ್ಹಾ, ಡಿವೈಎಸ್ಪಿ ರಶ್ಮಿ, ಸರ್ಕಲ್ ಇನ್ಸ್‌ಪೆಕ್ಟರ್ ಡಿ.ಆರ್. ಲಿಂಗಪ್ಪ, ಎಸೈ ಪ್ರಕಾಶ್ ಭೇಟಿ ನೀಡಿ ತನಿಖೆ ಕೈಗೊಂಡಿದ್ದರು. ಅಲ್ಲದೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಮಾಹಿತಿಗಳನ್ನು ಸಂಗ್ರಹಿಸಿಕೊಂಡಿದೆ.
ಮರಣೋತ್ತರ ಪರೀಕ್ಷೆಯನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಪ್ರಕರಣ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದೆ.