ವಾಹನಕ್ಕೆ ಬೆಂಕಿ ಹಚ್ಚಿದ ಆರೋಪಿ ಸಿಬ್ಬಂದಿ ಅಮಾನತಿಗೆ ತುರ್ತು ಗ್ರಾ.ಪಂ.ಸಭೆ ನಿರ್ಣಯ
ಉಪ್ಪಿನಂಗಡಿ: ಪೆರಾಬೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಪದ್ಮಾವತಿ ಎಂಬವರ ದ್ವಿಚಕ್ರ ವಾಹನಕ್ಕೆ ಇತ್ತೀಚೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ನಡೆದ ಪೆರಾಬೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ರಾ.ಪಂ.ನ ತುರ್ತು ಸಭೆಯಲ್ಲಿ ಪ್ರಕರಣದ ಆರೋಪಿ ಸಿಬ್ಬಂದಿಯನ್ನು ಅಮಾನತಿನಲ್ಲಿಡಲು ನಿರ್ಣಯ ಕೈಗೊಳ್ಳಲಾಯಿತು.
ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಮಾಪಲಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀವ್ರ ಮಾತಿನ ಚಕಮಕಿ ನಡೆಯಿತು.
ಪೆರಾಬೆ ಪಂಚಾಯಿತಿ ವ್ಯಾಪ್ತಿಯ ನಾಗರಿಕರು ನೀಡಿರುವ ಮನವಿ ಹಿನ್ನೆಲೆಯಲ್ಲಿ ಈ ಸಭೆ ನಡೆದಿದ್ದು, ತುರ್ತು ಸಭೆ ನಡೆಸಲು ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಒಪ್ಪಿಗೆ ಪಡೆಯದೆ ಸಭೆ ಕರೆದಿರುವ ಬಗ್ಗೆ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಮಾಪಲ ಹಾಗು ಉಪಾಧ್ಯಕ್ಷೆ ಸುಮತಿ ಅಲಂಗಪ್ಪೆ ಆಕ್ಷೇಪ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ತಾನು ರಾಜಿನಾಮೆ ನೀಡಿ ನಿರ್ಗಮಿಸುತ್ತೇನೆ ಎಂದು ಅಧ್ಯಕ್ಷರು ಬೆದರಿಕೆಯೊಡ್ಡಿದ ಘಟನೆಯೂ ನಡೆಯಿತು.
ಬಳಿಕ ಪ್ರಕರಣದ ಆರೋಪಿ ಸಿಬ್ಬಂದಿ ಗೋವಿಂದ ನಾಯ್ಕ ಅವರನ್ನು ಅಮಾನತಿನಲ್ಲಿಡಲು ತೀರ್ಮಾನಿಸಲಾಯಿತು.
ಪಂಚಾಯಿತಿ ಕಚೇರಿಗೆ ಸ್ಥಳೀಯರ ಮುತ್ತಿಗೆ: ಸಭೆ ಮುಗಿದು ಹೊರ ಬರುವ ಸಂದರ್ಭದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಪೆರಾಬೆ ಗ್ರಾಮಸ್ಥರು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಆರೋಪಿ ಸಿಬ್ಬಂದಿ ವಿರುದ್ಧ ಕೈಗೊಂಡಿದ್ದ ಕ್ರಮದ ಬಗ್ಗೆ ಜನತೆಗೆ ಈಗಲೇ ತಿಳಿಸಿ, ಎಂದು ಪಟ್ಟುಹಿಡಿದು ಸೂಕ್ಷ್ಮತೆ ಮೂಡಿಸಿದರು.
ಈ ಸಂದರ್ಭ ಕಾರ್ಯದರ್ಶಿ ಲಲಿತಾ ಜಿ.ಡಿ., ಸದಸ್ಯರಾದ ರೋಯಿ ಅಬ್ರಾಹಂ, ವಸಂತ ಕೆದ್ದೋಟೆ, ಮೋಹನ್ದಾಸ್ ರೈ, ನೇಮಿರಾಜ್ ಕಲ್ಲಡ್ಕ, ಚಂದ್ರಶೇಖರ ರೈ ಅಗತ್ತಾಡಿ, ಕುಮಾರ ಬಿ.ಕೆ. ಶಿವಪ್ಪ ಇಡಾಳ, ರತಿ ಕೋಡ್ಲ, ಲತಾ ಸುರುಳಿ, ಮೋಹಿನಿ ಕುಂಟ್ಯಾನ, ಗಂಗಾರತ್ನ ವಸಂತ್ ಇದ್ದರು.